ನ್ಯೂಯಾರ್ಕ್ (ಅಮೆರಿಕ): ರಷ್ಯಾ ದಾಳಿಯಿಂದ ನಲುಕಿರುವ ಉಕ್ರೇನ್ ಪರವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಮತ ಹಾಕದ ವಿಷಯವು ಈಗ ಚರ್ಚಾ ವಸ್ತುವಾಗಿದ್ದು, ಮತದಿಂದ ದೂರಿದ ಉಳಿದ ಕಾರಣಕ್ಕೆ ಅಮೆರಿಕವು ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ತಂದುಕೊಳ್ಳುವುದು ಮೂರ್ಖತನವಾಗಲಿದೆ ಎಂದು ಅದೇ ದೇಶದ ರಿಪಬ್ಲಿಕನ್ ಸೆನೆಟರ್ ಎಚ್ಚರಿಸಿದ್ದಾರೆ.
ಬುಧವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಖಂಡಿಸಿ ನಿರ್ಣಯ ಅಂಗೀಕರಿಸಲಾಗಿತ್ತು. ಈ ವೇಳೆ ಮತದಾನದಿಂದ ಭಾರತ ದೂರ ಉಳಿದುಕೊಂಡು ನಿರ್ಲಪ್ತತೆ ಕಾಯ್ದುಕೊಂಡಿದೆ. ಇದರ ಬೆನ್ನಲೆ ಭಾರತದೊಂದಿಗಿನ ಸಂಬಂಧ ಕುರಿತು ಅಮೆರಿಕದ ಸೆನೆಟರ್ ಪೆನಾಲ್ ಸಭೆ ನಡೆದಿದೆ. ಇದರಲ್ಲಿ ಇಂಡಿಯಾನಾ ಸೆನೆಟರ್ ಟಾಡ್ ಯಂಗ್ ಮಾತನಾಡಿ, ಉಕ್ರೇನ್ ವಿಷಯವನ್ನು ಮುಂದಿಟ್ಟುಕೊಂಡು ಅಮೆರಿಕವು ಭಾರತದ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ ತಂದರೆ, ಅದು ಮೂರ್ಖತನವಾಗಿದೆ. ಹೀಗಾಗಿ ದೂರದೃಷ್ಟಿಯನ್ನು ಹೊಂದಬೇಕಾಗುತ್ತದೆ ಎಂದು ಹೇಳಿದ್ದಾರೆ.
ಟಾಡ್ ಯಂಗ್ ಮಾತ್ರವಲ್ಲದೇ ಇತರ ಸೆನೆಟರ್ಗಳು ಕೂಡ ಭಾರತದ ಆರ್ಥಿಕತೆ ಮತ್ತು ಜನಸಂಖ್ಯೆಯ ಗಾತ್ರ ಹಾಗೂ ಅದರ ಕಾರ್ಯತಂತ್ರದ ಮಹತ್ವವನ್ನು ಅರಿತುಕೊಳ್ಳಬೇಕೆಂದು ಅಮೆರಿಕಕ್ಕೆ ಒತ್ತಿ ಹೇಳಿದ್ದಾರೆ. ದಕ್ಷಿಣ ಏಷ್ಯಾದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಕೂಡ ಉಕ್ರೇನ್ನಲ್ಲಿ ಭಾರತದ ಮಹತ್ವದ ಹೆಚ್ಚುತ್ತಿದೆ. ಮೇಲಾಗಿ ಅಲ್ಲಿ ಭಾರತದ ವಿದ್ಯಾರ್ಥಿ ಸಾವನ್ನಪ್ಪಿದ ನಂತರ ರಷ್ಯಾದ ವಿರುದ್ಧ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸಭೆಯ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಅಣುಸ್ಥಾವರಕ್ಕೆ ಬೆಂಕಿ: ರಷ್ಯಾ ಸೇನಾ ಕಾರ್ಯಾಚರಣೆ ನಿಲ್ಲಿಸಲು ಬೈಡನ್ ಒತ್ತಾಯ
ಭಾರತವು ಈಗಾಗಲೇ ಉಕ್ರೇನ್ಗೆ ಮಾನವೀಯ ನೆಲಗಟ್ಟಿನ ಸರಬರಾಜುಗಳನ್ನು ಏರ್ಲಿಫ್ಟ್ ಮಾಡಿದೆ. ಜತೆಗೆ ಇತರ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಲು ವಿಶ್ವಸಂಸ್ಥೆಗೆ ಬದ್ಧವಾಗಿರಬೇಕೆಂದು ಭಾರತವು ಹೇಳಿದೆ ಎಂಬುವುದನ್ನೂ ಪ್ರಸ್ತಾಪಿಸಿರುವ ಡೊನಾಲ್ಡ್ ಲು, ರಷ್ಯಾ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅಷ್ಟೆ ಅಲ್ಲದೇ, ಅಮೆರಿಕವು ಮಾಸ್ಕೋದೊಂದಿಗೆ ಭಾರತದ ಬಾಂಧವ್ಯ ವೃದ್ಧಿಸಲು ಪ್ರಯತ್ನ ಪಡುತ್ತಿದೆ. ರಷ್ಯಾ ತನ್ನ ದಾಳಿಯನ್ನು ಹಿಂಪಡೆಯಲು ಕರೆ ನೀಡಲಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಮಾತುಕತೆ ಮೂಲಕವೇ ಸಮಸ್ಯೆ ಬಗೆ ಹರಿಸಿಕೊಳ್ಳುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ದೂರವಾಣಿ ಕರೆ ಮಾಡಿ ಮನವಿ ಮಾಡಿದ್ದಾರೆ ಎಂಬ ವಿಚಾರವನ್ನೂ ಇದೇ ವೇಳೆ ಲು ಪ್ರಸ್ತಾಪಿಸಿದ್ದಾರೆ.