ನವದೆಹಲಿ: ಯುದ್ಧದ ಪರಿಣಾಮಗಳು, ಪ್ರತಿಕ್ರಿಯೆಗಳು ಸರಪಣಿಯಂತಿರುತ್ತವೆ. ಅದರಂತೆ ಉಕ್ರೇನ್ ರಷ್ಯಾ ಯುದ್ಧ ಇಡೀ ಪ್ರಪಂಚದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಆರ್ಥಿಕ ಕ್ಷೇತ್ರ ಸಾಕಷ್ಟು ತೊಂದರೆಗೆ ಒಳಗಾಗುತ್ತಿವೆ. ಯುದ್ಧ ಪ್ರಾರಂಭವಾದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಗಳು ಸಾಕಷ್ಟು ಕುಸಿತ ಕಂಡಿದ್ದು, ಎಲ್ಲೆಡೆ ಈಗ ಇದೇ ಚರ್ಚೆ. ಇದೀಗ ಅತ್ಯಗತ್ಯವಾಗಿ ಬೇಕಾಗಿರುವ ನೀರಿಗೆ ಯಾವುದೇ ಭದ್ರತೆ ಇಲ್ಲ ಎಂದು ಸಂಭಾವ್ಯ ನೀರಿನ ಕೊರತೆ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
ಉಕ್ರೇನ್ - ರಷ್ಯಾ ಯುದ್ಧದ ಹಿನ್ನೆಲೆ ವಿಶ್ವದಲ್ಲಿ ಇಂಧನ ಕೊರತೆ ಕುರಿತು ಈಗಾಗಲೇ ಚರ್ಚೆ ಆರಂಭವಾಗಿದೆ. ಇದ್ದರೆ ಬೆನ್ನಲ್ಲೇ ತಜ್ಞರು ಸಂಭಾವ್ಯತೆಯ ಬಗ್ಗೆ ಗಮನ ಹರಿಸುವ ಅಗತ್ಯತೆಯ ಬಗ್ಗೆ ಹೇಳಿದ್ದಾರೆ. ಯುದ್ಧದಿಂದ ಹಾನಿಗೊಳಗಾದ ದೇಶವು ಶೀಘ್ರದಲ್ಲೇ ನೀರಿನ ಕೊರತೆ ಎದುರಿಸಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಡ್ವಾನ್ಸ್ಡ್ ಸೆಂಟರ್ ಫಾರ್ ವಾಟರ್ ರಿಸೋರ್ಸಸ್ ಡೆವಲಪ್‌ಮೆಂಟ್ ಅಂಡ್ ಮ್ಯಾನೇಜ್‌ಮೆಂಟ್ (ACWADAM)ನ ಕಾರ್ಯನಿರ್ವಾಹಕ ನಿರ್ದೇಶಕ ಹಿಮಾಂಶು ಕುಲಕರ್ಣಿ ಯುದ್ಧದ ಬೆನ್ನಲ್ಲೇ ಸಂಭಾವ್ಯ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಯುದ್ಧ ಜಲ ಸಂಪನ್ಮೂಲಗಳ ಮೇಲೆ ಇನ್ನೂ ಅಷ್ಟಾಗಿ ಪರಿಣಾಮ ಬೀರದಿರಬಹುದು.
ಆದರೆ ಗಾಳಿ, ನೀರು ಮತ್ತು ಮಣ್ಣು ಈ ಯುದ್ಧದ ಪರಿಸ್ಥಿತಿಯಲ್ಲಿ ಕಲುಷಿತಗೊಂಡಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇಂತಹ ಭೀಕರ ಯುದ್ಧದಲ್ಲಿ ಬಳಸುವ ರಾಸಾಯನಿಕಗಳು ಪರಿಸರದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
ಭೂವಿಜ್ಞಾನಿ ಎಸ್.ಪಿ.ಸತಿ ಕೂಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಯುದ್ಧದಲ್ಲಿ ಕ್ಷಿಪಣಿಗಳು ಸಿಡಿದಾಗಲೆಲ್ಲ ಅವು ಭೂಮಿಯಲ್ಲಿ ಬಿರುಕುಗಳನ್ನು ಸೃಷ್ಟಿಸುತ್ತವೆ. ನೈಸರ್ಗಿಕ ಸಂಪನ್ಮೂಲಗಳನ್ನು ಹಾನಿಗೊಳಗಾಗಿಸುತ್ತವೆ. ಇದು ಗುಡ್ಡಗಾಡು ಪ್ರದೇಶಗಳು, ಏರಿಳಿತದ ಭೂಮಿ, ಜಲಚರಗಳಿಗೆ ಮತ್ತು ಭೂಗರ್ಭದ ನೀರಿನ ಮೂಲಗಳ ಹಾನಿಗೆ ಸಾಕ್ಷಿಯಾಗಬಹುದು. ಅಷ್ಟೇ ಅಲ್ಲ ಶಸ್ತ್ರಾಸ್ತ್ರಗಳಲ್ಲಿ ಬಳಸಲಾಗುವ ಬೃಹತ್ ಪ್ರಮಾಣದ ರಾಸಾಯನಿಕಗಳು ಅಂತರ್ಜಲವನ್ನು ಕಲುಷಿತಗೊಳಿಸುವಲ್ಲಿ ಪ್ರಮುಖ ಕಾರಣವಾಗಿವೆ ಎಂದು ತಿಳಿಸಿದರು.
ಉಕ್ರೇನಿಯನ್ ನಾಗರಿಕರು ಈಗಾಗಲೇ ನೀರಿನ ಗುಣಮಟ್ಟದ ಬಗ್ಗೆ ದೂರುಗಳನ್ನು ಹೊಂದಿದ್ದಾರೆ. ವಿಶ್ವಸಂಸ್ಥೆಯ ಮಕ್ಕಳ ನಿಧಿಯ (UNICEF) 2019 ರ ವರದಿಯುಮಕ್ಕಳು ಸಂಘರ್ಷದ ಹಿಂಸಾಚಾರಕ್ಕಿಂತ ಶುದ್ಧ ನೀರಿನ ಕೊರತೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾಯುವ ಸಾಧ್ಯತೆ ಹೆಚ್ಚು ಎಂದು ಹೇಳಿತ್ತು.
ಇದನ್ನೂ ಓದಿ: ಉಕ್ರೇನ್ನಿಂದ 11 ಸಾವಿರ ಜನರ ಸ್ಥಳಾಂತರ.. ನವದೆಹಲಿಗೆ ಆಗಮಿಸಿದ 170 ನಾಗರಿಕರ ಹೊತ್ತ ವಿಮಾನ
ಇನ್ನು ವಾಟರ್‌ಮ್ಯಾನ್, ಸ್ಟಾಕ್‌ಹೋಮ್ ವಾಟರ್ ಪ್ರಶಸ್ತಿ ವಿಜೇತ ರಾಜೇಂದ್ರ ಸಿಂಗ್, ಇದು ಪ್ರಕೃತಿಯ ಮೇಲಿನ ದೌರ್ಜನ್ಯವಾಗಿದೆ. ಯುದ್ಧ ನಡೆದಾಗಲೆಲ್ಲ ಪ್ರಕೃತಿಗೆ ದೊಡ್ಡ ಹಾನಿ ಉಂಟಾಗುತ್ತದೆ. ಇದು ಪ್ರಕೃತಿಯ ವಿರುದ್ಧದ ಹಿಂಸೆ. ಇಂದಲ್ಲದಿದ್ದರೆ ನಾಳೆ ಆ ದೇಶವು ನೀರಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ಸಂಘರ್ಷದಿಂದ ಪ್ರಕೃತಿ ಕಲುಷಿತಗೊಂಡಿದೆ. ಹೀಗೆ ಮುಂದುವರಿದರೆ ಉಕ್ರೇನ್ನಲ್ಲಿ ಸರಿಪಡಿಸಲಾಗದ ಸಮಸ್ಯೆ ಉದ್ಭವಿಸಬಹುದು.