ವಾಷಿಂಗ್ಟನ್: 2021ರ ಏಪ್ರಿಲ್ ವೇಳೆಗೆ ಅಮೆರಿಕಾದ ಎಲ್ಲಾ ನಾಗರಿಕರಿಗೂ ಕೋವಿಡ್-19 ವ್ಯಾಕ್ಸಿನ್ ಲಭ್ಯವಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅತಿ ಶೀಘ್ರದಲ್ಲಿ ವ್ಯಾಕ್ಸಿನ್‌ಗೆ ಅನುಮತಿ ಸಿಗಲಿದೆ. ಕೂಡಲೇ ದೇಶದ ಎಲ್ಲಾ ನಾಗರಿಕರಿಗೂ ಆಡಳಿತ ವಿಭಾಗದ ಲಸಿಕೆಯನ್ನು ಪೂರೈಕೆ ಮಾಡಲಿದೆ. ಪ್ರತೀ ತಿಂಗಳು ಲಕ್ಷಾಂತರ ಡೋಸ್‌ಗಳು ಲಭ್ಯವಾಗಲಿವೆ. 2021ರ ಏಪ್ರಿಲ್ ವೇಳೆಗೆ ಸಾಕಷ್ಟು ಲಸಿಕೆ ಸಿಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೋವಿಡ್-19 ವ್ಯಾಕ್ಸಿನ್ ತಯಾರಿಸಲು ಯುಎಸ್‌ನ ತಜ್ಞ ವೈದ್ಯರು ಮತ್ತು ವಿಜ್ಞಾನಿಗಳು ಹಗಲಿರುಳು ಎನ್ನದೆ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಕೆಲಸ ನಡೆಯುತ್ತಿದೆ. ಅದಷ್ಟು ಶೀಘ್ರದಲ್ಲೇ ಲಸಿಕೆಯನ್ನು ಅಭಿವೃದ್ಧಿಪಡಿಸಲಿದ್ದಾರೆ ಎಂದು ಹೇಳಿದ್ದಾರೆ.
ಅತ್ಯಂತ ಸುರಕ್ಷತೆಯಲ್ಲಿ ಎಲ್ಲಾ ವ್ಯಾಕ್ಸಿನ್ ಸದಸ್ಯರ ಗುಣಮಟ್ಟದ ವೈದ್ಯಕೀಯ ಪ್ರಯೋಗ ನಡೆಯುತ್ತಿದ್ದು, ಇದರಲ್ಲಿ ದೊಡ್ಡ ಯಶಸ್ವಿ ಕಾಣಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲಸಿಕೆಗೆ ಅನುಮತಿ ಸಿಕ್ಕ 24 ಗಂಟೆಗಳಲ್ಲಿ ಎಲ್ಲರಿಗೂ ಪೂರೈಕೆ ಆಗಲಿದೆ ಎಂದಿದ್ದಾರೆ.
ಪ್ರಸ್ತುತ ಮಾಹಿತಿ ಪ್ರಕಾರ ಅಮೆರಿಕಾದಲ್ಲಿ 67,05,114 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈವರೆಗೆ 1,98,197 ಜನ ಪ್ರಾಣ ಕಳೆದುಕೊಂಡಿದ್ದಾರೆ.