ನ್ಯೂಯಾರ್ಕ್: ದಶಕದ ಹಿಂದೆ ಅಮೆರಿಕದ ರಿಪಬ್ಲಿಕನ್ ಪಕ್ಷದ ರಾಜಕಾರಣಿಯಾಗಿರುವ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಅವರ ಮೇಲಿದ್ದ ನೈತಿಕ ಆರೋಪಗಳನ್ನು ತೆರವುಗೊಳಿಸಲು ಸಹಾಯ ಮಾಡಿದ್ದ ವಕೀಲ ಇದೀಗ ದೋಷಾರೋಪಣೆ ವಿಚಾರಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ವಾದಿಸಲಿದ್ದಾರೆ.
ಹೌದು.. ಸೆನೆಟ್ನಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನುರಿತ ವಕೀಲ ಬುಚ್ ಬೋವರ್ಸ್ ಸಮರ್ಥಿಸಿಕೊಳ್ಳಲಿದ್ದಾರೆ. 2012 ರಲ್ಲಿ, ನಿಕ್ಕಿ ಹ್ಯಾಲೆ ಅವರು ದಕ್ಷಿಣ ಕ್ಯಾಲಿಫೋರ್ನಿಯಾದ ರಾಜ್ಯಪಾಲೆಯಾಗಿದ್ದ ವೇಳೆ ತನ್ನ ಸಿಬ್ಬಂದಿ ಪರ ಲಾಬಿ ನಡೆಸಿರುವ ಆರೋಪಕ್ಕೆ ಗುರಿಯಾಗಿದ್ದರು. ನಿಕ್ಕಿ ಹ್ಯಾಲೆಯನ್ನು ದೋಷಮುಕ್ತಗೊಳಿಸುವಲ್ಲಿ ಬುಚ್ ಬೋವರ್ಸ್ ಮಹತ್ತರ ಪಾತ್ರ ವಹಿಸಿದ್ದರು.
ಜನವರಿ 6 ರಂದು ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಮಹಿಳೆ, ಪೊಲೀಸ್ ಸಿಬ್ಬಂದಿ ಸೇರಿ ಐವರು ಮೃತಪಟ್ಟಿದ್ದರು. ದಾಳಿ ನಡೆಸಲು ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಟ್ರಂಪ್ ವಿರುದ್ಧ ದೋಷಾರೋಪಣೆ ಪಟ್ಟಿ ಸಿದ್ಧವಾಗಿದ್ದು, ಫೆ.8 ರಿಂದ ಇದರ ವಿಚಾರಣೆಗಳು ಆರಂಭವಾಗಲಿದೆ.
ಅಮೆರಿಕದ ಇತಿಹಾಸದಲ್ಲಿಯೇ ಎರಡು ಬಾರಿ ವಾಗ್ದಂಡನೆಗೆ ಒಳಗಾದ ಅಧ್ಯಕ್ಷ ಎಂಬ ಅಪಕೀರ್ತಿಗೆ ಡೊನಾಲ್ಡ್ ಟ್ರಂಪ್ ಒಳಗಾಗಿದ್ದಾರೆ. ಈ ಆರೋಪ ಸಾಬೀತಾದರೆ ಟ್ರಂಪ್ ಇನ್ನು ಮುಂದೆ ಯಾವುದೇ ಸಾರ್ವಜನಿಕ ಹುದ್ದೆ ಅಲಂಕರಿಸುವಂತಿಲ್ಲ. ವಕೀಲ ಬುಚ್ ಬೋವರ್ಸ್ ಅವರು ಈ ಸಂಕಷ್ಟದಿಂದ ಟ್ರಂಪ್ರನ್ನು ಪಾರು ಮಾಡುತ್ತಾರಾ ಎಂದು ನೋಡಬೇಕಾಗಿದೆ.