ವಾಷಿಂಗ್ಟನ್: ರಷ್ಯಾವು ಉಕ್ರೇನ್ ಮೇಲೆ ಮಾಡುತ್ತಿರುವ ಆಕ್ರಮಣವನ್ನ ಖಂಡಿಸುವಂತೆ ಹಾಗೂ ಪುಟಿನ್ ವಿರುದ್ಧ ನಿಲ್ಲಲು ಅಮೆರಿಕದ ಜೊತೆ ನಿಕಟವಾಗಿ ಕೆಲಸ ಮಾಡುವಂತೆ ಭಾರತೀಯ ನಾಯಕರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಶ್ವೇತಭವನ ತಿಳಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ, 'ನಿಮಗೆ ತಿಳಿದಿರುವಂತೆ ನಾವು ಭಾರತದ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇವೆ. ರಷ್ಯಾ ಅಧ್ಯಕ್ಷ ಪುಟಿನ್ ಅವರ ಉಕ್ರೇನ್ ಆಕ್ರಮಣದ ವಿರುದ್ಧ ನಿಲ್ಲಲು ನಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ಭಾರತೀಯರನ್ನ ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇವೆ' ಎಂದು ತಿಳಿಸಿದ್ದಾರೆ.
ಒಂದೆಡೆ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣವನ್ನ ಅನೇಕ ರಾಷ್ಟ್ರಗಳು ಖಂಡಿಸಿವೆ. ಮತ್ತೆ ಕೆಲವು ದೇಶಗಳು ರಷ್ಯಾವನ್ನು ಬೆಂಬಲಿಸಿವೆ. ಆದ್ರೆ ಭಾರತ ಮಾತ್ರ ತಟಸ್ಥ ನೀತಿ ಕೈಗೊಂಡಿದೆ. ಈ ಹಿನ್ನೆಲೆ ಡೆಮಾಕ್ರಟಿಕ್ ನಾಯಕರು ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳನ್ನು ಖಂಡಿಸುವಂತೆ ಭಾರತಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆ ಎಫೆಕ್ಟ್; ದಿನದ ಆರಂಭದಲ್ಲೇ ಸೆನ್ಸೆಕ್ಸ್ 800 ಅಂಕಗಳ ಜಿಗಿತ