ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಮತ ಗಳಿಸಿ ಚುನಾಯಿತ ಅಧ್ಯಕ್ಷರಾಗಿರುವ ಜೋ ಬೈಡನ್ ಅವರು, ಜನವರಿಯಲ್ಲಿ ತಮ್ಮ ಪ್ರಮಾಣ ವಚನ ಸ್ವೀಕಾರ ಹಾಗೂ ಉದ್ಘಾಟನಾ ಸಮಾರಂಭವನ್ನು ನಡೆಸುತ್ತಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ.
ಫಾಕ್ಸ್ ನ್ಯೂಸ್ನಲ್ಲಿ ಭಾನುವಾರ ಪ್ರಸಾರವಾದ "ಫಾಕ್ಸ್ & ಫ್ರೆಂಡ್ಸ್" ಕಾರ್ಯಕ್ರಮದಲ್ಲಿ ಸಹ - ನಿರೂಪಕ ಬ್ರಿಯಾನ್ ಕಿಲ್ಮೇಡ್ ಅವರೊಂದಿಗಿನ ಸಂದರ್ಶನದಲ್ಲಿ ಭಾಗಿಯಾಗಿದ್ದ ಯುಎಸ್ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಬೈಡನ್ ಪದಗ್ರಹಣ ಸಮಾರಂಭ ನಡೆಸುತ್ತಾರೆಯೇ ಎಂದು ಕೇಳಲಾಯಿತು. ಈ ವೇಳೆ ಟ್ರಂಪ್, ನಾನು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಯೋತ್ಪಾದಕ ಪಟ್ಟಿಯಿಂದ ಸುಡಾನ್ ತೆಗೆದುಹಾಕಲು ಯುಎಸ್ ಒಪ್ಪಿಗೆ
ದೇಶವು ನ್ಯಾಯ ಸಮ್ಮತವಲ್ಲದ ಅಧ್ಯಕ್ಷರನ್ನು ಹೊಂದಿರುವ ಬಗ್ಗೆ ನಾನು ಚಿಂತೆ ಮಾಡುತ್ತಿದ್ದೇನೆ. ಇದು ನಿಕಟ ಚುನಾವಣೆಯಂತೆ ಇರಲಿಲ್ಲ. ನಾವು ಜಾರ್ಜಿಯಾವನ್ನು ದೊಡ್ಡ ಮೊತ್ತದಲ್ಲಿ ಗೆದ್ದಿದ್ದೇವೆ. ಪೆನ್ಸಿಲ್ವೇನಿಯಾವನ್ನು ಹೆಚ್ಚಿನ ಮತಗಳಲ್ಲಿ ಹಾಗೂ ವಿಸ್ಕಾನ್ಸಿನ್ನಲ್ಲೂ ಗೆದ್ದಿದ್ದೇವೆ ಎಂದು ಅವರು ಹೇಳಿದರು.
ಟ್ರಂಪ್ ಹೂಡಿದ್ದ ಮೊಕದ್ದಮೆ ಯುಎಸ್ ಸುಪ್ರೀಂ ಕೋರ್ಟ್ ನಲ್ಲಿ ತಿರಸ್ಕೃತ: ಅಮೆರಿಕದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಬೈಡನ್ ಗೆಲುವನ್ನು ಅಮಾನ್ಯಗೊಳಿಸಲು ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೂಡಿದ್ದ ಮೊಕದ್ದಮೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೊದಲು ಇದೇ ಮೊಕದ್ದಮೆಯನ್ನು ಸ್ಥಳೀಯ ಹಾಗೂ ಫೆಡರಲ್ ನ್ಯಾಯಾಲಯ ತಿರಸ್ಕರಿಸಿತ್ತು.