ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಆಯೋಜನೆಗೊಂಡಿದ್ದ ವರ್ಚುವಲ್ ಅಧ್ಯಕ್ಷೀಯ ಚುನಾವಣಾ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದ ಬಳಿಕ ಮೊದಲ ಬಾರಿಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಟ್ರಂಪ್ ಭಾಗವಹಿಸಿದ್ದರು. ಅಧ್ಯಕ್ಷೀಯ ಚರ್ಚೆ ಆಯೋಗವು ಅ.15ರಂದು ವರ್ಚುವಲ್ ಡಿಬೇಟ್ ನಡೆಸುವ ಬಗ್ಗೆ ಘೋಷಿಸಿತ್ತು. ಆದರೆ ಟ್ರಂಪ್ ಭಾಗವಹಿಸಲು ನಿರಾಕರಿಸಿದ್ದಾರೆ. ಟ್ರಂಪ್ ಹಾಗೂ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ನಡುವಿನ ಎರಡನೇ ಅಧ್ಯಕ್ಷೀಯ ಚರ್ಚೆ ಇದಾಗಿತ್ತು.
ಅಲ್ಲದೆ, ಎರಡನೇ ಅಧ್ಯಕ್ಷೀಯ ಚರ್ಚೆಯು ನಗರದ ಸಭೆಯೊಂದರ ರೂಪದಲ್ಲಿರಲಿದೆ. ಇದರಲ್ಲಿ ದೂರ ದೂರದ ಸ್ಥಳಗಳಿಂದಲೂ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷೀಯ ಚರ್ಚೆ ಆಯೋಗ ತಿಳಿಸಿತ್ತು. ಇದಕ್ಕೂ ಮುನ್ನ ಸೆ. 29ರಂದು ಇಬ್ಬರೂ ಮೊದಲ ಅಧ್ಯಕ್ಷೀಯ ಚುನಾವಣಾ ಚರ್ಚೆಯಲ್ಲಿ ಭಾಗಿಯಾಗಿದ್ದರು.
ಆಯೋಗವು ಚರ್ಚೆಯ ಶೈಲಿಯನ್ನೇ ಬದಲಿಸಿದೆ. ಅದು ನಮಗೆ ಸ್ವೀಕಾರಾರ್ಹವಾಗಿಲ್ಲ. ಅಲ್ಲದೆ ನಾನು ಮೊದಲ ಚರ್ಚೆಯಲ್ಲಿ ಬಿಡೆನ್ರನ್ನು ಸೋಲಿಸಿದ್ದೇನೆ. ಅದೂ ಸುಲಭವಾಗಿ ಸೋಲಿಸಿದ್ದೇನೆ ಎಂದು ಟ್ರಂಪ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಾನು ವರ್ಚುವಲ್ ಚರ್ಚೆಯಲ್ಲಿ ಭಾಗಿಯಾಗಲ್ಲ, ಅಲ್ಲಿ ನನ್ನ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ ಎಂದಿದ್ದಾರೆ.
ಇನ್ನೊಂದೆಡೆ ಡೆಲವೇರ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅಧ್ಯಕ್ಷೀಯ ಚುನಾವಣೆ ಪ್ರತಿಸ್ಪರ್ಧಿ ಜೋ ಬಿಡೆನ್, ಅಧ್ಯಕ್ಷರು ಏನು ಮಾಡಲಿದ್ದಾರೆಂದು ನಮಗೆ ತಿಳಿಯುತ್ತಿಲ್ಲ. ಟ್ರಂಪ್ ಪ್ರತಿ ಸೆಕೆಂಡಿಗೆ ಮನಸ್ಸು ಬದಲಾಯಿಸುತ್ತಾರೆ. ಅದರ ಬಗ್ಗೆ ಪ್ರತಿಕ್ರಿಯಿಸುವುದು ನನಗೆ ಬೇಜವಾಬ್ದಾರಿತನ ಎಂದೆನಿಸುತ್ತೆ. ನಾನು ಆಯೋಗದ ಶಿಫಾರಸುಗಳಂತೆ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.