ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಂದು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಟ್ರಂಪ್ ನನ್ನ ಮೇಲೆ ಅತ್ಯಾಚಾರ ಯತ್ನಿಸಿದ್ದರು ಎಂದು ಅಂಕಣಕಾರ್ತಿಯೊಬ್ಬರು ಆರೋಪಿಸಿದ್ದಾರೆ.
ಎಲ್ಲೆ ಫ್ಯಾಷನ್ಸ್ ಮ್ಯಾಗಜೀನ್ನ ಅಂಕಣಕಾರ್ತಿ ಇ. ಜೀನ್ ಕ್ಯಾರೋಲ್ ಎರಡು ದಶಕಗಳ ಹಿಂದೆ ಟ್ರಂಪ್, ತನ್ನ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದರು ಎಂದು ಅವರ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ನ್ಯೂಯಾರ್ಕ್ ಮ್ಯಾಗಜೀನ್ನಲ್ಲಿ ನಿನ್ನೆ ಈ ಭಾಗ ಪ್ರಕಟವಾಗಿದೆ.
ಕ್ಯಾರೋಲ್ ಹೇಳಿಕೊಂಡಂತೆ, 1995-1996ರಲ್ಲಿ ಆಕೆ ಮ್ಯಾಗಜೀನ್ ಬರಹಗಾರ್ತಿಯಾಗಿದ್ದಾಗ, ಟ್ರಂಪ್ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದರು. ನಮ್ಮಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಮ್ಯಾನ್ಹಟನ್ನ ಬೆರ್ಗ್ಡೊರ್ಫ್ ಗುಡ್ಮ್ಯಾನ್ ಡಿಪಾರ್ಟ್ಮೆಂಟ್ ಸ್ಟೋರ್ನಲ್ಲಿ ಶಾಪಿಂಗ್ ಮಾಡುತ್ತಿದ್ದ ವೇಳೆ, ಡ್ರೆಸ್ಸಿಂಗ್ ರೂಂಗೆ ಹೋದಾಗ ಟ್ರಂಪ್ ಸಹ ಬಂದರು. ಅಲ್ಲಿನ ಬಾಗಿಲು ಮುಚ್ಚಿ, ನನ್ನನ್ನು ಜೋರಾಗಿ ಗೋಡೆಗೆ ತಳ್ಳಿದರು. ಆಗ ತಲೆಗೆ ಬಲವಾದ ಪೆಟ್ಟು ಬಿತ್ತು. ಟ್ರಂಪ್ ಬಲವಂತವಾಗಿ ಚುಂಬಿಸಿದರು ಎಂದಿದ್ದಾರೆ.
ನನ್ನ ಬಟ್ಟೆ ಕಳಚಲು ಮುಂದಾದಾಗ, ಅವರನ್ನು ತಳ್ಳಿ ಅಲ್ಲಿಂದ ಓಡಿಹೋದೆ. ಆನಂತರ ಪರಿಣಾಮಗಳನ್ನು ಅರಿತು ನಾನು ಪೊಲೀಸರಿಗೆ ದೂರು ನೀಡಲು ಮನಸ್ಸು ಮಾಡಲಿಲ್ಲ. ಜೀವ ಬೆದರಿಕೆಯಿಂದ ಇದನ್ನು ಮುಂಚೆ ಹೇಳಲಾಗಲಿಲ್ಲ ಎಂದೂ ಹೇಳಿದ್ದಾರೆ.
ಆದರೆ, ಕ್ಯಾರೋಲ್ ಆರೋಪವನ್ನು ಟ್ರಂಪ್ ಅಲ್ಲಗಳೆದಿದ್ದಾರೆ. ನನಗೆ ಆಕೆ ಯಾರೆಂದೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ನ್ಯೂಯಾರ್ಕ್ ಮ್ಯಾಗಜೀನ್ ಸುಳ್ಳು ಸುದ್ದಿ ಪ್ರಕಟಿಸಿದೆ ಎಂದೂ ಕಿಡಿ ಕಾರಿದ್ದಾರೆ.