ನವದೆಹಲಿ : ಕೋವಿಡ್‌ನ ಹೊಸ ರೂಪಾಂತರಿ ಒಮಿಕ್ರಾನ್ ಪತ್ತೆಯಾದ ಹಿನ್ನೆಲೆ ಕೆಲವು ದೇಶಗಳು ದಕ್ಷಿಣ ಆಫ್ರಿಕಾಗೆ ನೇರ ವಿಮಾನ ಸೇವೆಗೆ ನಿಷೇಧಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಘೆಬ್ರೆಯೆಸಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿರುವ ಅವರು, ರೂಪಾಂತರಿ ಒಮಿಕ್ರಾನ್‌ನಿಂದಾಗಿ ಕೆಲವು ದೇಶಗಳು ದಕ್ಷಿಣ ಆಫ್ರಿಕಾದಿಂದ ನೇರ ವಿಮಾನಯಾನವನ್ನು ನಿರ್ಬಂಧ ಮುಂದುವರಿಸಿರುವುದು ನಿರಾಶಾದಾಯಕವಾಗಿದೆ. ಕೆಲವು ದೇಶಗಳು ಕೋವಿಡ್-19 ನೆಗೆಟಿವ್ ವರದಿಗಳನ್ನೂ ಸ್ವೀಕರಿಸುತ್ತಿಲ್ಲ ಎಂಬುದು ಬೇಸರ ತರಿಸಿದೆ ಎಂದಿದ್ದಾರೆ.
ಆಫ್ರಿಕನ್ ದೇಶಗಳಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಣತಿಯ ಗೌರವಕ್ಕೆ ಬದ್ಧವಾಗಿದೆ. ಜೊತೆಗೆ ಅವರ ಪಾರದರ್ಶಕತೆ ಹಾಗೂ ಕಾಳಜಿಯಿಂದ ಒಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿದ ಮಾಹಿತಿ ನೀಡಿದ್ದಾರೆ. ಇದು ಎಲ್ಲೆಡೆ ಜನರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಟೆಡ್ರೊಸ್ ಹೇಳಿದ್ದಾರೆ.
ಒಮಿಕ್ರಾನ್ ಬಗ್ಗೆ ದಕ್ಷಿಣ ಆಫ್ರಿಕಾದಿಂದ ವಿಶ್ವ ಆರೋಗ್ಯ ಸಂಸ್ಥೆಗೆ ನ.24ರಂದು ವರದಿ ನೀಡಿದೆ. ಕೂಡಲೇ ಎಚ್ಚೆತ್ತ ಡಬ್ಲ್ಯೂಹೆಚ್‌ಒ ಜಗತ್ತನ್ನು ಎಚ್ಚರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು.
ಇದರ ನಡುವೆಯೇ ಭಾರತದಲ್ಲಿ ಈ ಹೊಸ ರೂಪಾಂತರಿ ವೇಗವಾಗಿ ಹರಡುತ್ತಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 17 ಹೊಸ ಪ್ರಕರಣ ಪತ್ತೆಯಾಗಿವೆ. ಒಟ್ಟು ಪ್ರಕರಣಗಳು ಈಗ 21ಕ್ಕೆ ಏರಿಕೆಯಾಗಿದೆ.
ಆರೋಗ್ಯ ಸಚಿವಾಲಯವು ವಿದೇಶದಿಂದ ಬರುವವರ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಕೋವಿಡ್ ಅಪಾಯದಲ್ಲಿರುವ ದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಿದೆ.
ವಿದೇಶಗಳಿಂದ ಭಾರತಕ್ಕೆ ಪ್ರಯಾಣಿಸುವ ಮುನ್ನ ಏರ್ ಸುವಿಧಾ ಪೋರ್ಟಲ್‌ನಲ್ಲಿ ತಮ್ಮ 14-ದಿನಗಳ ಪ್ರಯಾಣದ ಇತಿಹಾಸ ಮತ್ತು ಮಾನ್ಯವಾದ ಕೊರೊನಾ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಒಮಿಕ್ರಾನ್‌ನಿಂದ ಇದುವರೆಗೆ ಸಾವು ವರದಿಯಾಗಿಲ್ಲ: ವಿಶ್ವ ಆರೋಗ್ಯ ಸಂಸ್ಥೆ