ಜಿನಿವಾ: ಕೊರೊನಾ ವೈರಸ್ ವಿರುದ್ಧ ಲಸಿಕೆ ವರ್ಷಾಂತ್ಯಕ್ಕೆ ಸಿದ್ಧವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ಕುರಿತು ಜಾಗತಿಕ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಎರಡು ದಿನಗಳ ಸಭೆಯ ಅಂತ್ಯದಲ್ಲಿ ಮಾತನಾಡಿ ಡಬ್ಲ್ಯುಎಚ್‌ಒ ಮುಖ್ಯಸ್ಥ ಈ ಘೋಷಣೆ ಹೊರಡಿಸಿದ್ದಾರೆ. 'ನಮಗೆ ಲಸಿಕೆಗಳು ಬೇಕಾಗುತ್ತವೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ನಮಗೆ ಲಸಿಕೆ ಸಿಗಬಹುದೆಂಬ ಭರವಸೆ ಇದೆ. ನಮಗೆ ಅದರಲ್ಲಿ ವಿಶ್ವಾಸವಿದೆ' ಎಂದು ಅವರು ಹೇಳಿದ್ದಾರೆ.
ಮಾರುಕಟ್ಟೆಗೆ ಲಸಿಕೆಗಳು ಬಂದ ನಂತರ ಅವುಗಳ ಸಮಾನ ವಿತರಣೆ ಖಚಿತಪಡಿಸಿಕೊಳ್ಳಲು ಒಗ್ಗಟ್ಟಿನ ಮತ್ತು ರಾಜಕೀಯ ಬದ್ಧತೆ ಅಗತ್ಯವನ್ನು ಎಲ್ಲ ನಾಯಕರು ತೋರಬೇಕು ಎಂದು ಟೆಡ್ರೊಸ್ ಪುನರುಚ್ಚರಿಸಿದರು. 'ನಮಗೆ ಪರಸ್ಪರರು ಬೇಕು. ನಮಗೆ ಐಕಮತ್ಯಯೂ ಬೇಕು ಮತ್ತು ವೈರಸ್ ವಿರುದ್ಧ ಹೋರಾಡಲು ನಾವು ಹೊಂದಿರುವ ಎಲ್ಲ ಶಕ್ತಿಯನ್ನು ಬಳಸಬೇಕಾಗಿದೆ' ಎಂದರು.
ಡಬ್ಲ್ಯುಎಚ್‌ಒ ನೇತೃತ್ವದ ಕೋವಾಕ್ಸ್ ಜಾಗತಿಕ ಲಸಿಕೆ ಸೌಲಭ್ಯದ ಒಂಬತ್ತು ಪ್ರಾಯೋಗಿಕ ಲಸಿಕೆಗಳನ್ನು ಹೊಂದಿದೆ. 'ವಿಶೇಷವಾಗಿ ಲಸಿಕೆಗಳು ಮತ್ತು ಇತರ ಉತ್ಪನ್ನಗಳಲ್ಲಿನ ಪ್ರಮುಖ ಸಾಧನ ಎಂದರೆ ನಮ್ಮ ನಾಯಕರ ರಾಜಕೀಯ ಬದ್ಧತೆ ಹಾಗೂ ಲಸಿಕೆಗಳ ಸಮನಾದ ವಿತರಣೆ ಮುಖ್ಯ ಎಂದರು.
ಫಿಜರ್ / ಬಯೋಟೆಕ್ ಮತ್ತು ಅಸ್ಟ್ರಾಜೆನೆಕಾ / ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೋವಿಡ್-19 ಲಸಿಕೆಗಳು ಪ್ರಸ್ತುತ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಿಯಂತ್ರಕ ಅನುಮೋದನೆ ಪಡೆದು ಮೊದಲ ಸ್ಥಾನದಲ್ಲಿವೆ.