ಜಿನೇವಾ(ಸ್ವಿಟ್ಜರ್ಲ್ಯಾಂಡ್): ಕೊರೊನಾ ವೈರಸ್ ಗಾಳಿಯಿಂದ ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದೆ.
ಮುಚ್ಚಿದ ಹಾಗೂ ಕಡಿಮೆ ಗಾಳಿ ಇರುವ ಸ್ಥಳಗಳಲ್ಲಿ ಕೊರೊನಾ ಸೋಂಕಿನ ವೈರಸ್ ಗಾಳಿಯಿಂದಲೇ ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವೈರಸ್ ಸೋಂಕಿನಿಂದ ಹರಡುವುದು ದೃಢವಾದರೆ ಕೊರೊನಾ ನಿಯಂತ್ರಣ ಮಾರ್ಗಸೂಚಿಗಳ ಮೇಲೆಯೂ ಪರಿಣಾಮ ಬೀರಲಿದೆ. ಒಳಾಂಗಣ ನಿಯಮಗಳಲ್ಲೂ ಕೂಡಾ ಬದಲಾವಣೆಯಾಗಲಿದೆ ಎಂದು ಡಬ್ಲ್ಯೂಹೆಚ್ಒ ಅಭಿಪ್ರಾಯಪಟ್ಟಿದೆ.
ಸುಮಾರು ಇನ್ನೂರಕ್ಕೂ ಹೆಚ್ಚು ವೈದ್ಯರು ಡಬ್ಲ್ಯೂಹೆಚ್ಒಗೆ ಪತ್ರ ಬರೆದಿದ್ದು, ಪತ್ರದಲ್ಲಿ ಕೊರೊನಾ ವೈರಸ್ ಗಾಳಿಯಿಂದ ಹರಡುವುದನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದ್ದರು. ಇತ್ತೀಚೆಗೆ ಸಂಶೋಧನೆಯೊಂದು ಗಾಳಿಯಿಂದ ವೈರಸ್ ಹರಡುತ್ತದೆ ಎಂದು ದೃಢಪಡಿಸಿದ ನಂತರ ಡಬ್ಲ್ಯೂಹೆಚ್ಒ ಈ ಅಭಿಪ್ರಾಯ ತಳೆದಿದೆ.
ಇದಕ್ಕೂ ಮೊದಲು ಕೊರೊನಾ ವೈರಸ್ ಕೇವಲ ಕೆಮ್ಮು ಹಾಗೂ ಸೀನುವಾಗ ಹೊರಹೊಮ್ಮುವ ದ್ರವ ರೂಪದ ಕಣಗಳಿಂದ ಮಾತ್ರ ವೈರಸ್ ಹರಡುತ್ತದೆ ಎಂದು ಹೇಳಿತ್ತು. ಈಗ ಗಾಳಿಯಿಂದಲೂ ಹರಡುವ ಸಾಧ್ಯತೆ ಇದೆ ಎಂದಿರುವುದು ಮತ್ತಷ್ಟು ಆತಂಕ ಮೂಡಿಸಿದೆ.