ವಾಷಿಂಗ್ಟನ್: ಸ್ಫರ್ಧಾತ್ಮಕ ಯುಗದಲ್ಲಿ ಚೀನ, ಅಮೆರಿಕದ ಕಾರ್ಯತಂತ್ರದ ಬೆದರಿಕೆಯಾಗಿ ಹೊರಹೊಮ್ಮಲಿದೆ. ಇದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿರುವ ಅಮೆರಿಕದ ಉಪಸ್ಥಿತಿಯನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳುವ ಅಗತ್ಯತೆಯನ್ನು ಬಿಂಬಿಸುತ್ತದೆ ಎಂಬುದನ್ನು ಪೆಂಟಗನ್‌ನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅಮೆರಿಕ ಸೇನೆಯನ್ನು ಹೊಂದಿರುವುದರಿಂದ, ಅಮೆರಿಕದ ಸ್ಥಾನವನ್ನು ಬಲಪಡಿಸಲು ಹಾಗೂ ಜಾಗತಿಕಮಟ್ಟದಲ್ಲಿ ವ್ಯವಹಾರ ನಡೆಸುವುದಕ್ಕೆ, ಹೂಡಿಕೆದಾರರೊಂದಿಗೆ ವಿಶ್ವಾಸಗಳಿಸಲು ಇದು ಸಹಕಾರಿಯಾಗಿದೆ ಎಂದು ಅಮೆರಿಕ ಸೇನೆಯ ಕಾರ್ಯದರ್ಶಿ ರಿಯಾನ್ ಡಿ ಮೆಕಾರ್ಥಿ ಮಂಗಳವಾರ ಹೇಳಿದ್ದಾರೆ.
ವಿಶ್ವದ ಜಿಡಿಪಿಯ ಶೇಕಡಾ 60 ಕ್ಕಿಂತಲೂ ಹೆಚ್ಚು ಮಲಕ್ಕಾ ಜಲಸಂಧಿಯ ಮೂಲಕ ಹರಿದು ಬರ್ತಿದೆ. ಚೀನಾವೂ ತನ್ನ 1.1 ಬಿಲಿಯನ್ ಜನರಿಗೆ ಸರಕುಗಳನ್ನು ಹೊಂದಿಸುವ ಸಲುವಾಗಿ, ಜಾಗತಿಕ ಮಟ್ಟದಲ್ಲಿ ಅಭಿವೃದ್ದಿ ಸಾಧಿಸಲು ರೂಪಿಸಿದ ಯೋಜನೆಯಾದ 'ಬೆಲ್ಟ್ ಮತ್ತು ರೋಡ್' ಇನಿಶಿಯೇಟಿವ್ (ಬಿಆರ್ಐ)ವನ್ನು ಹೆಚ್ಚು ಅವಲಂಬಿಸಿದೆ.
ಇಂಡೋ-ಪೆಸಿಫಿಕ್ ಭಾಗದಲ್ಲಿ ವಿಶ್ವದ ಅಗ್ರಗಣ್ಯ ಜನಸಂಖ್ಯಾ ದೇಶಗಳು, ಮೂರು ದೊಡ್ಡ ಆರ್ಥಿಕತೆ ಹೊಂದಿರುವ ಪ್ರದೇಶಗಳು, ವಿಶ್ವದ 10 ಅತಿದೊಡ್ಡ ಸೈನ್ಯಗಳಲ್ಲಿ ಆರು ಸೈನ್ಯಗಳನ್ನು ಹೊಂದಿವೆ. ಇಲ್ಲಿ ಅಮೆರಿಕ ಐದು ದ್ವಿಪಕ್ಷೀಯ ಒಪ್ಪಂದಗಳನ್ನು ನಿರ್ವಹಿಸುತ್ತಿದೆ. ಜೊತೆಗೆ ಆಧುನೀಕರಿಸಿದ ಶಸ್ತ್ರಾಸ್ತ್ರವನ್ನು ಸಹ ಹೊಂದಿದೆ. ಈ ಎಲ್ಲವೂ ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಮೃದ್ಧಿಗೆ ನಿರ್ಣಾಯಕವಾಗಿದೆ ಎಂಬುದು ಮೆಕಾರ್ಥಿ ಅವರ ಹೇಳಿಕೆ. ಆದ್ದರಿಂದ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿರುವ ಚೀನಾದ 'ಬೆಲ್ಟ್ & ರೋಡ್' ಇನಿಶಿಯೇಟಿವ್‌ಗೆ ಪರ್ಯಾಯವಾಗಿ ಅಮೆರಿಕ ತನ್ನ ಬಲ ವೃದ್ಧಿಗೊಳಿಸಲು, ನಿರಂತರ ಉಪಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಈ ಪ್ರದೇಶದಲ್ಲಿನ ಸಂಘರ್ಷವನ್ನು ತಡೆಯಲು, ಅಮೆರಿಕ ಸೇನೆಯು ಈ ಪ್ರದೇಶದಲ್ಲಿಯೇ ತಳವೂರಬೇಕು. ಅಗತ್ಯಬಿದ್ದರೆ ಸಂಘರ್ಷದಲ್ಲಿ ಗೆಲ್ಲಲು ಸಮರ್ಥರಿರಬೇಕು ಎಂದು ಮೆಕಾರ್ಥಿ ಎಚ್ಚರಿಸಿದ್ದಾರೆ.
ಚೀನವು ಇತರೆ ದೇಶಗಳ ಮೇಲೆ ತನ್ನ ದೇಶದ ಅರ್ಥಿಕತೆಯನ್ನು ಬಲವಂತದಿಂದ ಹೇರುತ್ತದೆ. ಇದರೊಂದಿಗೆ ಇರುವ ಹಲವಾರು ಪಾಲುದಾರರು ಅನಿವಾರ್ಯತೆಯಿಂದ ವ್ಯವಹಾರ ಬೆಳೆಸಿದ್ದಾರೆ. ಇದರಿಂದ ಅಭಿವೃದ್ದಿಯ ಹೊರತಾಗಿ ದುರ್ಬಲತೆಯೇ ಹೆಚ್ಚಾಗಿ ಕಾಣುತ್ತದೆ ಎಂದು ಮೆಕಾರ್ಥಿ ಹೇಳಿದ್ದಾರೆ.