ವಾಷಿಂಗ್ಟನ್: ಕೊರೊನಾ ವೈರಸ್ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಮೆರಿಕದ ಕೆಲವು ರಕ್ಷಣಾ ಕಂಪನಿಗಳಲ್ಲಿ ಪಾಲು ಪಡೆಯಲು ಚೀನಾ ಪ್ರಯತ್ನಿಸುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಕಳವಳ ವ್ಯಕ್ತಪಡಿಸಿದೆ.
ಸಾಂಕ್ರಾಮಿಕ ರೋಗದ ಮಧ್ಯೆ ರಕ್ಷಣಾ ಇಲಾಖೆಯು ರಾಷ್ಟ್ರೀಯ ಭದ್ರತೆಯ ಮೇಲೆ ನಿಗಾ ಇಡುವುದು ಮತ್ತು ಸಣ್ಣ ಕಂಪನಿಗಳನ್ನು ರಕ್ಷಿಸಲು ಸಹಾಯ ಮಾಡುವುದು ಕಷ್ಟಕರವಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ರಕ್ಷಣಾ ಕಂಪನಿಗಳಿಗೆ ಎಂದಿಗಿಂತಲೂ ಹೆಚ್ಚು ಬಂಡವಾಳದ ಅಗತ್ಯವಿರುವ ಈ ಸನ್ನಿವೇಶದ ಲಾಭ ಪಡೆಯಲು ಚೀನಾ ಪ್ರಯತ್ನಿಸುತ್ತಿದೆ ಎಂಬ ಎಲ್ಲಾ ವಿಷಯಗಳ ಬಗ್ಗೆ ನಾವು ಹೆಚ್ಚು ಗಮನ ಹರಿಸುತ್ತಿದ್ದೇವೆ ಎಂದು ಅಮೆರಿಕ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೆರಿಕದ ಜೊತೆ ಆರ್ಥಿಕ ಯುದ್ಧಕ್ಕೆ ಸಜ್ಜಾಗುವ ವಿರೋಧಿಗಳ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ನಮ್ಮ ವಿರೋಧಿಗಳು ನಮ್ಮೊಂದಿಗೆ ಒಂದು ರೀತಿಯ ಆರ್ಥಿಕ ಯುದ್ಧಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಈ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ರಕ್ಷಣಾ ಉಪ ಕಾರ್ಯದರ್ಶಿ ಎಲ್ಲೆನ್ ಲಾರ್ಡ್ ತಿಳಿಸಿದ್ದಾರೆ.