ನ್ಯೂಯಾರ್ಕ್: ಕೊರೊನಾ ವೈರಸ್ ಎರಡು ಲಕ್ಷಕ್ಕೂ ಅಧಿಕ ಜನರನ್ನು ಸಾವಿನ ಮನೆ ಸೇರಿಸಿದೆ. ಇದ್ರ ಜೊತೆಗೆ ಸಾಕಷ್ಟು ಮಂದಿ ಜಗತ್ತಿನಾದ್ಯಂತ ಮರಣಶಯ್ಯೆಯಿಂದ ಮರಳಿ ಬಂದು ಬದುಕು ಮುನ್ನಡೆಸಲು ಮುಂದಾಗಿದ್ದಾರೆ. ಇದರ ಜೊತೆ ಜೊತೆಗೆನೇ ಕೆಲವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗುತ್ತಿದ್ದಾರೆ. ಅಂಥದ್ದೇ ಒಂದು ಕುತೂಹಲಕಾರಿ ಸ್ಟೋರಿ ಇದು.
1918ರಲ್ಲಿ ಇಡೀ ಜಗತ್ತಿನಲ್ಲಿ ತಲ್ಲಣ ಮೂಡಿಸಿದ್ದ ಸ್ಪ್ಯಾನಿಷ್ ಫ್ಲೂ ತಗುಲಿ ಪಾರಾಗಿದ್ದ ಮಹಿಳೆ ಇದೀಗ ಕೋವಿಡ್-19 ವಿರುದ್ಧದ ಹೋರಾಟದಲ್ಲೂ ಸಾವು ಜಯಿಸಿದ್ದಾಳೆ. ಏಂಜಲಿನಾ ಫ್ರೀಡ್ಮನ್ ನ್ಯೂಯಾರ್ಕ್ನ ಮೊಹೆಗನ್ ಲೇಕ್ನಲ್ಲಿ ವಾಸವಾಗಿದ್ದು, ಈ ಹಿಂದೆ 1918ರಲ್ಲಿ ಇವರ ತಾಯಿ ಮಹಾಮಾರಿ ಸ್ಪ್ಯಾನಿಷ್ ಜ್ವರದಿಂದ ಸಾವನ್ನಪ್ಪಿದ್ದರಂತೆ. ಈ ಸಂದರ್ಭದಲ್ಲಿ ಜನಿಸಿದ್ದ ಏಂಜಲಿನಾಗೆ ಡೆಡ್ಲಿ ವೈರಸ್ ಬಾಧಿಸಿದ್ದು ಸಕಾಲದಲ್ಲಿ ದೊರೆತ ಚಿಕಿತ್ಸೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಳು. ಆದ್ರೆ, ಇದೀಗ ಕೋವಿಡ್ ತಗುಲಿ ಆಸ್ಪತ್ರೆ ಸೇರಿದ್ದ ಈಕೆ ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ. ಈ ಮೂಲಕ ಎರಡು ಬಾರಿ ಸಾವಿನ ದವಡೆಯಿಂದ ಪಾರಾದ ವಿಶೇಷ ವ್ಯಕ್ತಿತ್ವ ಇವಳದ್ದಾಗಿದೆ.