ವಾಷಿಂಗ್ಟನ್: ಇಡೀ ವಿಶ್ವವೇ ಕೊರೊನಾದಿಂದ ತತ್ತರಿಸಿದೆ. ಈ ಮಧ್ಯೆ ಮೂರನೇ ಅಲೆಯ ಭೀತಿಯೂ ಕಾಡುತ್ತಿದೆ. ಇದೀಗ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಯುಎಸ್ ಘಟಕವು ಟೆಕ್ಸಾಸ್‌ನಲ್ಲಿ Monkeypox ವೈರಸ್ ಸೋಂಕಿನ ಅಪರೂಪದ ಪ್ರಕರಣ ವರದಿಯಾಗಿದೆ ಎಂದು ತಿಳಿಸಿದೆ.
ನೈಜೀರಿಯಾದಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದ ಯುಎಸ್ ನಿವಾಸಿಯಲ್ಲಿ ಜುಲೈ 15 ರಂದು ಮಂಕಿಪಾಕ್ಸ್ ಪ್ರಕರಣ ಕಂಡುಬಂದಿದೆ ಎಂದು ಸಿಡಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ಸೋಂಕಿತ ವ್ಯಕ್ತಿಯನ್ನು ಡಲ್ಲಾಸ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಇತರ ಅನೇಕ ಜನರು ಸಹ ಇದರ ಅಪಾಯಕ್ಕೆ ಒಳಗಾಗಬಹುದು. ಈ ಹಿನ್ನೆಲೆಯಲ್ಲಿ ಇದನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಂಕಿಪಾಕ್ಸ್ ವೈರಸ್ ಚಿಕನ್ಪಾಕ್ಸ್ ವೈರಸ್ ಜಾತಿಗೆ ಸೇರಿದೆ. ಇದರ ಸೋಂಕು ಸಹ ಸಾಕಷ್ಟು ಗಂಭೀರವಾಗಿರಲಿದೆ. ಇದರಲ್ಲಿ, ಚಿಕ್ಕ ಚಿಕ್ಕ ದದ್ದುಗಳು ಮತ್ತು ದೊಡ್ಡ ದದ್ದುಗಳು ಸೋಂಕಿತ ವ್ಯಕ್ತಿಯ ಮುಖ ಮತ್ತು ಇಡೀ ದೇಹದ ಮೇಲೆ ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ಸೋಂಕು 2 ರಿಂದ 4 ವಾರಗಳವರೆಗೆ ಇರಬಹುದು ಎಂದು ವೈದ್ಯ ಮೂಲಗಳು ತಿಳಿಸಿವೆ.