ಬ್ರೆಜಿಲ್: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಂತೆಯೇ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಬ್ರೆಜಿಲ್ ಆರೋಗ್ಯ ಸಚಿವಾಲಯವು ಕೋವಿಡ್-19 ಅಂಕಿ-ಅಂಶಗಳನ್ನು ತೆಗೆದು ಹಾಕಿದೆ.
ಈವರೆಗೆ 6,45,700 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿರುವ ದೇಶದಲ್ಲಿ ಸತತ ನಾಲ್ಕು ದಿನಗಳು 1,000 ಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟಿರುವುದು ವರದಿಯಾಗಿತ್ತು. ಹೀಗಾಗಿ ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಕ್ಕೆ ಜೈರ್ ಬೋಲ್ಸನಾರೊ ವ್ಯಾಪಕ ಟೀಕೆಗೆ ಗುರಿಯಾಗಿದ್ದರು, ಇದರ ಬಳಿಕ ಬ್ರೆಜಿಲ್ ಸರ್ಕಾರ ಈ ನಿರ್ಧಾರಕ್ಕೆ ಬಂದಿದ್ದು, ಕಳೆದ 24 ಗಂಟೆಗಳಲ್ಲಿ 27,075 ಹೊಸ ಕೇಸ್ಗಳು ಹಾಗೂ 904 ಸಾವು ವರದಿಯಾಗಿದೆ, 10,209 ಸೋಂಕಿತರು ಗುಣಮುಖರಾಗಿದ್ದಾರೆ ಎಂಬ ಮಾಹಿತಿಯನ್ನು ಮಾತ್ರ ಇದೀಗ ಆರೋಗ್ಯ ಸಚಿವಾಲಯ ನೀಡಿದೆ.
ಕೋವಿಡ್ ಡೇಟಾ ತೆಗೆದು ಹಾಕಿರುವುದಕ್ಕೆ ನಿಖರ ಕಾರಣ ತಿಳಿಸದ ಜೈರ್ ಬೋಲ್ಸನಾರೊ, ಈ ಅಂಕಿ-ಅಂಶಗಳು ದೇಶದ ವಸ್ತುಸ್ಥಿತಿಯನ್ನು ತಿಳಿಸುವುದಿಲ್ಲ. ಕೋವಿಡ್ ನಿಯಂತ್ರಿಸಲು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ. ಇವರ ನಿರ್ಧಾರವನ್ನು ಮಾಧ್ಯಮಗಳು ತೀವ್ರವಾಗಿ ಖಂಡಿಸಿವೆ.
ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಬ್ರೆಜಿಲ್ 2ನೇ ಸ್ಥಾನದಲ್ಲಿದೆ. ಸಾವಿನ ಸಂಖ್ಯೆಯಲ್ಲಿ ಇಟಲಿಯನ್ನು ಕಳೆದ ವಾರ ಹಿಂದಿಕ್ಕಿರುವ ಬ್ರೆಜಿಲ್ ಇದೀಗ ಅಮೆರಿಕ, ಇಂಗ್ಲೆಂಡ್ ನಂತರದ ಸ್ಥಾನದಲ್ಲಿದೆ. ದೇಶದಲ್ಲಿ ಸೋಂಕಿನ ಪ್ರಮಾಣ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.