ಸಾವೋ ಪೌಲೋ(ಬ್ರೆಜಿಲ್): ಬೈಕ್ ರ್‍ಯಾಲಿಯೊಂದರಲ್ಲಿ ಪಾಲ್ಗೊಂಡು ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೋ ಅವರಿಗೆ ಅಲ್ಲಿನ ಸರ್ಕಾರ ದಂಡ ವಿಧಿಸಿದೆ. ಸಾವೋ ಪೌಲೋದಲ್ಲಿ ಬೊಲ್ಸನಾರೋ ಪಾಲ್ಗೊಂಡಿದ್ದ ಮೋಟಾರ್ ಸೈಕಲ್ ರ್‍ಯಾಲಿಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದು, ಕೊರೊನಾ ಸಾಂಕ್ರಾಮಿಕ ಮಾರ್ಗಸೂಚಿಗಳನ್ನು ಪಾಲನೆ ಮಾಡಿರಲಿಲ್ಲ.
ಜೈರ್ ಬೊಲ್ಸನಾರೋ ಬೈಕ್ ಓಡಿಸುವಾಗ ಹೆಲ್ಮೆಟ್ ಧರಿಸಿದ್ದು, ಮಾಸ್ಕ್ ಧರಿಸಿರಲಿಲ್ಲ. ತಮ್ಮೊಂದಿಗೆ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದವರೂ ಕೂಡಾ ಮಾರ್ಗಸೂಚಿ ಪಾಲನೆ ಮಾಡಿರಲಿಲ್ಲ. ಈ ಆರೋಪದಲ್ಲಿ ಅವರಿಗೆ ನೂರು ಡಾಲರ್ ದಂಡ ವಿಧಿಸಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಬ್ರೆಜಿಲ್ ಸರ್ಕಾರ ಕೊರೊನಾ ನಿಯಮಗಳ ಉಲ್ಲಂಘನೆಗೆ ಮೇ 2020ರಿಂದ ದಂಡ ವಿಧಿಸುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದಿದ್ದವರು ಕಡ್ಡಾಯವಾಗಿ ದಂಡ ಪಾವತಿಸಬೇಕಾಗುತ್ತದೆ ಎಂಬ ನಿಯಮ ಜಾರಿಯಲ್ಲಿದೆ.
ಬೈಕ್ ರ್‍ಯಾಲಿ ಮಾತ್ರವಲ್ಲದೇ ಸಾವೋ ಪೌಲೋನ ಇಬಿರಾಪ್ಯೂರಾ ಪಾರ್ಕ್ ಬಳಿ ಧಾವಿಸಿದ ಜೈರ್ ಬೋಲ್ಸನಾರೋ ಕಾರಿನ ಮೇಲೆ ಹತ್ತಿ, ವ್ಯಾಕ್ಸಿನೇಷನ್ ಮಾಡಿಸಿಕೊಂಡವರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಪಾಕೆಟ್ ವೆಂಟಿಲೇಟರ್ ಆವಿಷ್ಕರಿಸಿದ ವಿಜ್ಞಾನಿ... ಹೀಗಿದೆ ಇದರ ಪ್ರಯೋಜನ!
ಕಳೆದ ಮೇ ತಿಂಗಳಲ್ಲೂ ಮರನ್ಹಾವೋ ನಗರದಲ್ಲಿ ಬೋಲ್ಸನಾರೋಗೆ ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಲಾಗಿತ್ತು.