ವಾಷಿಂಗ್ಟನ್: 2018ರಲ್ಲಿ ತೆರೆಕಂಡ ಹಾಲಿವುಡ್ನ ಸೂಪರ್ ಹಿಟ್ ಚಿತ್ರ 'ಬ್ಲಾಕ್ ಪ್ಯಾಂಥರ್'ನಲ್ಲಿ ಬುಡಕಟ್ಟು ಮುಖಂಡೆಯಾಗಿ ಕಾಣಿಸಿಕೊಂಡಿದ್ದ ನಟಿ ಡೊರೊಥಿ ಸ್ಟೀಲ್ (95) ಕೊನೆಯುಸಿರೆಳೆದಿದ್ದಾರೆ.
ಸಾವಿಗೆ ಕಾರಣ ತಿಳಿದು ಬಂದಿಲ್ಲ. ಅವರ ಏಜೆಂಟ್ ಮೂಲಕ ವಿಷಯ ತಿಳಿದು ಬಂದಿದೆ. ಡೊರೊಥಿ ಸ್ಟೀಲ್ ಅವರು ಡೆಟ್ರಾಯಿಟ್ನಲ್ಲಿರುವ ತಮ್ಮ ನಿವಾಸದಲ್ಲಿ ಅಸು ನೀಗಿದ್ದಾರೆ ಎಂದು ಅವರ ಏಜೆಂಟ್ ಆಗಿರುವ ಸಿಂಡಿ ಬಟ್ಲರ್ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
"ನಿಮ್ಮೊಂದಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಹಾಗೆಯೇ ಡೊರೊಥಿ ಸ್ಟೀಲ್ ಅವರಿಗೆ ಸಿನಿಮಾಗಳಲ್ಲಿ ಅವಕಾಶ ನೀಡಿದ ಎಲ್ಲ ಕ್ಯಾಸ್ಟಿಂಗ್ ಡೈರೆಕ್ಟರ್ಗಳಿಗೆ ಧನ್ಯವಾದಗಳು. ದೂರದಿಂದ ಅವರನ್ನು ಪ್ರೀತಿಸಿದ್ದಕ್ಕಾಗಿ ಇಡೀ ಜಗತ್ತಿಗೇ ಧನ್ಯವಾದಗಳು" ಎಂದು ಸಿಂಡಿ ಬಟ್ಲರ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಡ್ರೀಮ್ ಗರ್ಲ್ಗೆ 73ನೇ ಜನ್ಮದಿನದ ಸಂಭ್ರಮ..
'ಬ್ಲಾಕ್ ಪ್ಯಾಂಥರ್'ನ ಸೀಕ್ವೆಲ್ ಆಗಿರುವ 'ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್' ಸಿನಿಮಾ ಚಿತ್ರೀಕರಣದಲ್ಲಿ ಕಳೆದ ಜೂನ್ ತಿಂಗಳವರೆಗೆ ಡೊರೊಥಿ ಸ್ಟೀಲ್ ಭಾಗಿಯಾಗಿದ್ದರು. ಬಳಿಕ ಅವರನ್ನು ಡೆಟ್ರಾಯಿಟ್ಗೆ ಅವರ ಕುಟುಂಬದೊಂದಿಗೆ ಕಳುಹಿಸಿಕೊಡಲಾಗಿತ್ತು.
1926 ರಲ್ಲಿ ಜನಿಸಿದ್ದ ಸ್ಟೀಲ್ ತಮ್ಮ 88 ವರ್ಷ ವಯಸ್ಸಿನ ಬಳಿಕ ನಟನಾ ವೃತ್ತಿಗೆ ಬಂದಿದ್ದರು. ಮೊದಲು ಅವರು 'ದಿ ಟ್ರಬಲ್ ವಿಥ್ ಗೋಯಿಂಗ್ ಸಮ್ವೇರ್' ಎಂಬ ಟಿವಿ ಸಿರೀಸ್ನಲ್ಲಿ ಕಾಣಿಸಿಕೊಂಡರು. ಬಳಿಕ 'ಮೇರಿ ಕ್ರಿಸ್ಮಸ್' ಎಂಬ ಟಿವಿ ಚಿತ್ರದಲ್ಲಿ ನಟಿಸಿದ್ದರು. ಬ್ಲ್ಯಾಕ್ ಪ್ಯಾಂಥರ್ ಅವರ ಚೊಚ್ಚಲ ಚಲನಚಿತ್ರವಾಗಿತ್ತು.