ವಾಷಿಂಗ್ಟನ್(ಅಮೆರಿಕ): ಕುತೂಹಲಕಾರಿ ಬೆಳವಣಿಗೆಯಲ್ಲಿ ಇದೇ ವರ್ಷದ ಡಿಸೆಂಬರ್ ವೇಳೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮಹತ್ವದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಮಾತುಕತೆ ಎರಡೂ ರಾಷ್ಟ್ರಗಳ ನಡುವಿನ ಅನಾರೋಗ್ಯಕರ ಸ್ಪರ್ಧೆಯನ್ನು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ತರಲು ನಿಟ್ಟಿನಲ್ಲಿ ಮೊದಲ ಹಂತದ ಪ್ರಕ್ರಿಯೆಯಾಗಲಿದೆ ಎಂದು ಸಿಎನ್ಬಿಸಿ ಸುದ್ದಿವಾಹಿನಿ ವರದಿ ಮಾಡಿದೆ.
ಇತ್ತೀಚೆಗಷ್ಟೇ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೆಕ್ ಸುಲ್ಲಿವಾನ್ ಅವರು ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿ ಯಾಂಗ್ ಜಿಯೆಚಿ ಅವರನ್ನು ಜ್ಯೂರಿಚ್‌ನಲ್ಲಿ ಭೇಟಿಯಾದ ನಂತರ ಈ ಬೆಳವಣಿಗೆ ನಡೆದಿದೆ.
ಸೆಪ್ಟೆಂಬರ್ 9ರಂದು ಬೈಡನ್ ಮತ್ತು ಕ್ಸಿ ಜಿನ್‌ಪಿಂಗ್ ಅವರು ದೂರವಾಣಿ ಮಾತುಕತೆ ನಡೆಸುವ ಸಂಬಂಧ ಚರ್ಚಿಸುವ ಸಲುವಾಗಿ ಎರಡೂ ದೇಶಗಳ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ಎರಡೂ ದೇಶಗಳ ನಡುವಿನ ಗೊಂದಲ ಪರಿಹರಿಸಲು ಈ ಸಭೆ ನೆರವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು.
ಇಷ್ಟೇ ಅಲ್ಲದೇ, ಅಮೆರಿಕದ ಅಧಿಕಾರಿ ಜೆಕ್ ಸುಲ್ಲಿವಾನ್ ಈ ವಾರ ಬೆಲ್ಜಿಯಂನ ಬ್ರಸೆಲ್ಸ್ ಮತ್ತು ಪ್ಯಾರಿಸ್ಗೆ ಪ್ರಯಾಣ ಬೆಳೆಸಲಿದ್ದು, ಅಮೆರಿಕದೊಡಗಿನ ಸಂಬಂಧದ ಬಗ್ಗೆ ಚರ್ಚೆಗಳನ್ನು ನಡೆಸಲಿದ್ದಾರೆ.
ಇದನ್ನೂ ಓದಿ: ತೈಲಬೆಲೆ ಏರಿಕೆ ಹಿನ್ನೆಲೆ: ಭರಪೂರ ಆದಾಯ ಹೆಚ್ಚಿಸಿಕೊಂಡ ಅರಾಮ್ಕೋ ಕಂಪನಿ.. ಮೌಲ್ಯ ಎಷ್ಟು ಗೊತ್ತಾ?