ವಾಷಿಂಗ್ಟನ್, ಅಮೆರಿಕ: ಸುಮಾರು 49 ಮಂದಿಯನ್ನು ಬಲಿ ತೆಗೆದುಕೊಂಡಿದ್ದ ಒರ್ಲಾಂಡೋದ ಪಲ್ಸ್ ನೈಟ್ ಕ್ಲಬ್ ಗುಂಡಿನ ದಾಳಿ ಪ್ರಕರಣ ನಡೆದು ಐದು ವರ್ಷ ಪೂರ್ಣಗೊಂಡಿದ್ದು, ಈ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡುವ ಮಸೂದೆಗೆ ಸಹಿ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ಪಷ್ಟನೆ ನೀಡಿದ್ದಾರೆ.
ಘಟನೆಯಲ್ಲಿ ಬದುಕುಳಿದವರೊಂದಿಗೆ ಮತ್ತು ಮೃತಪಟ್ಟವರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿರುವ ಜೋ ಬೈಡನ್, ಪಲ್ಸ್ ನೈಟ್ ಕ್ಲಬ್ ಅನ್ನು ಪವಿತ್ರ ಮೈದಾನ ಎಂದು ವರ್ಣಿಸಿದ್ದಾರೆ.
ಹಿಂಸಾಚಾರವನ್ನು ಕಡಿಮೆ ಮಾಡಲು ದೇಶವು ಹೆಚ್ಚಿನದನ್ನು ಮಾಡಬೇಕು ಎಂದು ಬೈಡನ್ ಪ್ರತಿಪಾದಿಸಿದ್ದು, ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವುದು ಮತ್ತು ಗನ್ ಖರೀದಿದಾರರ ಹಿನ್ನೆಲೆಗಳನ್ನು ಪರಿಶೀಲನೆ ಮಾಡುವುದು ಅತ್ಯಂತ ಮುಖ್ಯ ಎಂದಿದ್ದಾರೆ.
ಇದನ್ನೂ ಓದಿ: ಛೇ.. ಮಾಂಸಕ್ಕಾಗಿ ಇಂಥಾ ಅಮಾನವೀಯ ಕೃತ್ಯಕ್ಕೆ ಇಳಿಯುವುದೇ?
ಏನಿದು ಪಲ್ಸ್ ನೈಟ್ ಕ್ಲಬ್ ಹಿಂಸಾಚಾರ?
ಅಮೆರಿಕದ ಇತಿಹಾಸದಲ್ಲಿ ಎಲ್ಜಿಬಿಟಿಕ್ಯೂ ಸಮುದಾಯದ ಮೇಲೆ ನಡೆದ ಅತಿ ದೊಡ್ಡ ದಾಳಿ ಇದಾಗಿದ್ದು, 2016ರ ಜೂನ್ 12ರಂದು ಲ್ಯಾಟಿನ್ ನೈಟ್ ಕಾರ್ಯಕ್ರಮದ ವೇಳೆ ಓಮರ್ ಮತೀನ್ ಎಂಬಾತ ಗುಂಡಿನ ದಾಳಿ ನಡೆಸಿದ್ದ.
ಘಟನೆಯಲ್ಲಿ 49 ಎಲ್ಜಿಬಿಟಿಕ್ಯೂ ಸಮುದಾಯದ ಮಂದಿ ಸಾವನ್ನಪ್ಪಿದ್ದು, 53 ಮಂದಿ ಗಾಯಗೊಂಡಿದ್ದರು. ಮೂರು ಗಂಟೆಗಳ ಕಾರ್ಯಾಚರಣೆ ನಂತರ ಓಮರ್ ಮತೀನ್ನನ್ನು ಪೊಲೀಸರು ಕೊಂದಿದ್ದರು.