ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಸಭೆಯೊಂದರಲ್ಲಿ ಭಾಗಿಯಾಗಲಿದ್ದು, ಜಿ-7 ಶೃಂಗಸಭೆಯಲ್ಲಿ ವಿವಿಧ ದೇಶಗಳ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಈ ಶೃಂಗಸಭೆಯಲ್ಲಿ ಅಮೆರಿಕದ ವಿದೇಶಾಂಗ ನೀತಿಯ ಬಗ್ಗೆ ಡೆಮಾಕ್ರಟಿಕ್ ಪಕ್ಷ ತಮ್ಮ ನಿಲುವನ್ನು ಸ್ವಲ್ಪ ಮಟ್ಟಿಗೆ ಬಹಿರಂಗಪಡಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಕೆಲವು ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ.
ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿದ್ದಾಗ 2015ರ ಬಹುಪಕ್ಷೀಯ ಇರಾನ್ ನ್ಯೂಕ್ಲಿಯರ್ ಒಪ್ಪಂದದಿಂದ ಹಿಂದೆ ಸರಿಯಲಾಗಿತ್ತು. ಈ ಒಪ್ಪಂದದಲ್ಲಿ ಮರು ಸೇರ್ಪಡೆಯಾಗಲು ಸಿದ್ಧ ಎಂಬ ಹೇಳಿಕೆಯನ್ನು ಅಮೆರಿಕ ವಿದೇಶಾಂಗ ಇಲಾಖೆ ಘೋಷಿಸಿದೆ.
ಇದನ್ನೂ ಓದಿ: ಪೊಲೀಸರ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕರು: ಇಬ್ಬರ ಸಾವು
ಜಾಗತಿಕವಾಗಿ ಕೊರೊನಾ ಸೋಂಕು ಸಾಕಷ್ಟು ಹಾವಳಿ ಸೃಷ್ಟಿಸುತ್ತಿದ್ದು, ಬಡರಾಷ್ಟ್ರಗಳು ಕೊರೊನಾ ವ್ಯಾಕ್ಸಿನ್ ಅನ್ನು ಕೊಳ್ಳುವ ಸಲುವಾಗಿ ನಾಲ್ಕು ಬಿಲಿಯನ್ ಡಾಲರ್ ನೆರವು ನೀಡುವುದಾಗಿ ಘೋಷಣೆ ಮಾಡಲಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂಥ ನೆರವು ನೀಡಲು ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದರು.
ಕೊರೊನಾ ಮಹಾಮಾರಿಯ ಕಾರಣದಿಂದ ಜಿ-7 ಶೃಂಗಸಭೆಯ ಜೊತೆಗೆ ವಾರ್ಷಿಕ ಭದ್ರತಾ ಸಮ್ಮೇಳನ ಕಾರ್ಯಕ್ರಮಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿವೆ.
ಪ್ಯಾರೀಸ್ ಒಪ್ಪಂದಕ್ಕೆ ಮರುಸೇರ್ಪಡೆ ಸಾಧ್ಯತೆ
ಅಮೆರಿಕದ ಆರ್ಥಿಕತೆಗೆ ಮಾರಕ ಎಂಬ ನೆಪವೊಡ್ಡಿ ಡೊನಾಲ್ಡ್ ಟ್ರಂಪ್ ಪ್ಯಾರಿಸ್ ಹವಾಮಾನ ಒಪ್ಪಂದಿಂದ 2017ರಲ್ಲಿ ಹಿಂದೆ ಸರಿದಿದ್ದರು. ಈ ಒಪ್ಪಂದದಲ್ಲಿಯೂ ಮರು ಸೇರ್ಪಡೆಯಾಗಲು ಅಧ್ಯಕ್ಷ ಜೋ ಬೈಡನ್ ಉತ್ಸುಕರಾಗಿದ್ದಾರೆ.
ಪ್ಯಾರಿಸ್ ಹವಾಮಾನ ಒಪ್ಪಂದ ಜಗತ್ತಿನ ಅತಿ ದೊಡ್ಡ ಹವಾಮಾನ ಒಪ್ಪಂದವಾಗಿದೆ. ಈ ಒಪ್ಪಂದದಲ್ಲಿ ಮರು ಸೇರ್ಪಡೆಯಾಗಲು ಜೋ ಬೈಡನ್ ತಾವು ಅಧಿಕಾರ ಸ್ವೀಕರಿಸಿದ ಮರುದಿನವೇ ಮಾತನಾಡಿದ್ದರು. ಆದರೆ ಇದು ಜಾರಿಗೆ ಬರಲು 30 ದಿನಗಳವರೆಗೆ ಕಾಯಬೇಕೆಂದು ತಿಳಿಸಿದ್ದರು.
ಕೋವ್ಯಾಕ್ಸ್ ಮತ್ತು ಜೋ ಬೈಡನ್
ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಕೊರೊನಾ ಲಸಿಕೆ ನ್ಯಾಯಯುತವಾಗಿ ದೊರೆಯಬೇಕೆಂಬುವ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕೋವ್ಯಾಕ್ಸ್ ಎಂಬ ಯೋಜನೆಯನ್ನು ರೂಪಿಸಿದೆ. ಈ ಯೋಜನೆಗೆ ಸಹಕಾರ ನೀಡುವಂತೆ ಜಿ-7 ರಾಷ್ಟ್ರಗಳಲ್ಲಿ ಬೈಡನ್ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿದ್ದಾಗ ವಿಶ್ವ ಆರೋಗ್ಯ ಸಂಸ್ಥೆ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ, ಆರೋಗ್ಯ ಸಂಸ್ಥೆಯಲ್ಲಿ ತಮ್ಮ ಸದಸ್ಯತ್ವವನ್ನು ಹಿಂಪಡೆದುಕೊಂಡಿದ್ದರು. ಈಗ ಬೈಡನ್ ಅಧಿಕಾರದಲ್ಲಿದ್ದು, ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆ ಸಾಧ್ಯತೆಯಿದೆ.
ಜಿ-7 ರಾಷ್ಟ್ರಗಳ ಬಗ್ಗೆ ಮಾಹಿತಿ
ಮುಂದುವರೆದ ಆರ್ಥಿಕತೆ ಹೊಂದಿರುವ ಜಗತ್ತಿನ ಏಳು ರಾಷ್ಟ್ರಗಳು ಜಿ-7 (ಗ್ರೂಪ್ 7) ಸಂಘಟನೆಯನ್ನು ಕಟ್ಟಿಕೊಂಡಿದ್ದು, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್, ಅಮೆರಿಕ ಈ ಸಂಘಟನೆಯ ಸದಸ್ಯ ರಾಷ್ಟ್ರಗಳಾಗಿವೆ.