ವಾಷಿಂಗ್ಟನ್ (ಅಮೆರಿಕ): ಡೊನಾಲ್ಡ್ ಟ್ರಂಪ್ ಅಧಿಕಾರವಧಿಯಲ್ಲಿ ಅಮೆರಿಕದ ಮಿಲಿಟರಿ ಅಕಾಡೆಮಿ ಬೋರ್ಡ್ಗೆ ಹೆಸರಿಸಲಾಗಿದ್ದ 18 ಜನರಿಗೆ ಬೈಡನ್ ಆಡಳಿತ ಕೊಕ್ ನೀಡಿದೆ.
ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ನಿರ್ದೇಶಕರಾದ ಕ್ಯಾಥಿ ರಸೆಲ್, ವಾಯುಪಡೆ, ಮಿಲಿಟರಿ ಮತ್ತು ನೌಕಾ ಅಕಾಡೆಮಿಗೆ ಭೇಟಿ ನೀಡುವ ಮಂಡಳಿಗಳಿಗೆ ಹೆಸರಿಸಲಾದ 18 ಜನರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ. ಬುಧವಾರ ಸಂಜೆ ವೇಳೆಗೆ ರಾಜೀನಾಮೆ ನೀಡುವಂತೆ ಉಲ್ಲೇಖಿಸಲಾಗಿದೆ.
ಶ್ವೇತಭವನದ ಸಲಹೆಗಾರ ಕೆಲಿಯಾನೆ ಕಾನ್ವೇ (ಏರ್ ಫೋರ್ಸ್ ಅಕಾಡೆಮಿ), ಪತ್ರಿಕಾ ಕಾರ್ಯದರ್ಶಿ ಸೀನ್ ಸ್ಪೈಸರ್ (ನೌಕಾ ಅಕಾಡೆಮಿ), ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್‌ಆರ್ ಮೆಕ್‌ಮಾಸ್ಟರ್ (ಮಿಲಿಟರಿ ಅಕಾಡೆಮಿ) ಮತ್ತುಕ ಚೇರಿ ಮತ್ತು ಆಡಳಿತ ನಿರ್ದೇಶಕ ರಸೆಲ್ ವಾಟ್ (ನೌಕಾ ಅಕಾಡೆಮಿ) ಅವರ ರಾಜೀನಾಮೆ ಪಡೆಯಲಾಗಿದೆ ಎನ್ನಲಾಗಿದೆ.
ಟ್ರಂಪ್ ಅಧಿಕಾರದಲ್ಲಿ ನೇಮಕವಾಗಿದ್ದ ಅಧಿಕಾರಿಗಳಿಗೆ ರಾಜೀನಾಮೆ ನೀಡುವಂತೆ ಕೇಳಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ. ಶ್ವೇತಭವನ ನಿಗದಿಪಡಿಸಿದ ಗಡುವು ಅಂದರೆ, ಬುಧವಾರ ಸಂಜೆ 6 ಗಂಟೆಯೊಳಗೆ ಅದೆಷ್ಟು ಅಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಈ ಮಂಡಳಿಗಳಲ್ಲಿ ಸೇವೆ ಸಲ್ಲಿಸಲು ಅಧಿಕಾರಿಗಳು ಅರ್ಹತೆ ಹೊಂದಿದ್ದಾರೆಯೇ, ಇಲ್ಲವೇ ಎಂಬುದುನ್ನು ಮೌಲ್ಯಮಾಪನ ಮಾಡಲು ನಾನು ಅವಕಾಶ ನೀಡುತ್ತೇನೆ ಎಂದಿದ್ದಾರೆ.
ಶ್ವೇತಭವನದ ಈ ಆದೇಶವನ್ನು ಹಲವರು ನಿರಾಕರಿಸಿದ್ದು, ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ. ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಶಾಸಕಾಂಗ ವ್ಯವಹಾರಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ನೌಕಾಪಡೆಯ ಅಕಾಡೆಮಿಯ ಜೊನಾಥನ್ ಹಿಲರ್, ನಾನು ರಾಜೀನಾಮೆ ನೀಡುತ್ತಿಲ್ಲ ಎಂದಿದ್ದಾರೆ. ನನ್ನ ದೇಶದ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಸಮರ್ಥ ಸೇನಾನಿಗಳನ್ನು ರೂಪಿಸುವುದು ನನ್ನ ಗುರಿ. ಪಕ್ಷಪಾತದ ರಾಜಕೀಯದಿಂದ ನನ್ನ ಹುದ್ದೆಗೆ ನಾನು ರಾಜೀನಾಮೆ ನೀಡುತ್ತಿಲ್ಲ ಎಂದು ಶ್ವೇತಭವನಕ್ಕೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಬಾಕ್ಸಿಂಗ್ಗೆ ಕಮೆಂಟೆಟರ್ ಆಗಲಿರುವ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್
ಕನ್ಸರ್ವೇಟಿವ್ ನ್ಯೂಸ್ ಚಾನೆಲ್ ನ್ಯೂಸ್‌ಮ್ಯಾಕ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಸ್ಪೈಸರ್ ಕೂಡ ಬೈಡನ್ ವಿರುದ್ಧ ಹರಿಹಾಯ್ದಿದ್ದಾರೆ. ಅವರು, ಅಮೆರಿಕನ್ನರ ಅಭಿವೃದ್ಧಿಗೆ ಶ್ರಮಿಸುವುದನ್ನು ಬಿಟ್ಟು, ಟ್ರಂಪ್ ಅವಧಿಯಲ್ಲಿ ನೇಮಿಸಿದ್ದ ಅಧಿಕಾರಿಗಳನ್ನು ಅಧಿಕಾರದಿಂದ ಕಿತ್ತೊಗೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.