ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಆಡಳಿತದಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಇಬ್ಬರು ಭಾರತೀಯ - ಅಮೆರಿಕನ್ ಮಹಿಳೆಯರಾದ ರಾಧಿಕಾ ಫಾಕ್ಸ್ ಮತ್ತು ಮೀರಾ ಜೋಶಿ ಅವರನ್ನು ಪ್ರಮುಖ ಏಜೆನ್ಸಿಗಳ ಪೈಕಿ ಹವಾಮಾನ ಮತ್ತು ಸಾರಿಗೆ ವಿಚಾರ ಮುನ್ನಡೆಸಲು 10 ಸದಸ್ಯರ ತಂಡದ ಭಾಗವಾಗಿ ಹೆಸರಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಶ್ವೇತಭವನದ ಪ್ರಕಟಣೆಯ ಪ್ರಕಾರ, ರಾಧಿಕಾ ಅವರು ಜಲ, ಪರಿಸರ ಸಂರಕ್ಷಣಾ ಏಜೆನ್ಸಿಯ ಸಹಾಯಕ ನಿರ್ವಾಹಕರಾಗಲಿದ್ದಾರೆ. ಜೋಶಿ ಅವರನ್ನು ಸಾರಿಗೆ ಇಲಾಖೆಯ ಫೆಡರಲ್ ಮೋಟಾರ್ ಕ್ಯಾರಿಯರ್ ಸೇಫ್ಟಿ ಆಡಳಿತ ನಿರ್ವಾಹಕರಾಗಿ ನೇಮಕ ಮಾಡಲಾಗಿದೆ ಎಂದು ಅಮೆರಿಕದ ಬಜಾರ್ ಮಾಧ್ಯಮ ವರದಿ ಮಾಡಿದೆ.
ಜನವರಿ 20ರಂದು ಪರಿಸರ ಸಂರಕ್ಷಣಾ ಸಂಸ್ಥೆಯಲ್ಲಿ (ಇಪಿಎ) ಜಲ ಪ್ರಧಾನ ಉಪ ಸಹಾಯಕ ಆಡಳಿತಾಧಿಕಾರಿಯಾಗಿ ನೇಮಕಗೊಂಡ ರಾಧಿಕಾ, ಪ್ರಸ್ತುತ ವಾಟರ್ ಕಾರ್ಯಕಾರಿ ಸಹಾಯಕ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಪಿಎಗೆ ಸೇರುವ ಮೊದಲು,ರಾಧಿಕಾ ಅವರು ಅಮೆರಿಕ ವಾಟರ್ ಅಲೈಯನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಸ್ಯಾನ್ ಫ್ರಾನ್ಸಿಸ್ಕೊ ಸಾರ್ವಜನಿಕ ಉಪಯುಕ್ತತೆಗಳ ಆಯೋಗದ ನೀತಿ ಮತ್ತು ಸರ್ಕಾರಿ ವ್ಯವಹಾರಗಳ ಕಾರ್ಯಸೂಚಿಯನ್ನು ನಿರ್ದೇಶಿಸಿದ್ದರು.
ಜೋಶಿ ಈ ಹಿಂದೆ ನ್ಯೂಯಾರ್ಕ್ ಸಿಟಿ ಟ್ಯಾಕ್ಸಿ ಮತ್ತು ಲಿಮೋಸಿನ್ ಆಯೋಗದ ಅಧ್ಯಕ್ಷ ಮತ್ತು ಸಿಇಒ ಆಗಿ ಸೇವೆ ಸಲ್ಲಿಸಿದ್ದರು.
ರಾಷ್ಟ್ರದ ಅತಿದೊಡ್ಡ ಬಾಡಿಗೆಗೆ ಸಾರಿಗೆ ನಿಯಂತ್ರಕದಲ್ಲಿ ಗಂಭೀರ ಅಪಾಯದ ಚಾಲಕರು ಮತ್ತು ಅಸುರಕ್ಷಿತ ವಾಹನಗಳನ್ನು ರಸ್ತೆಯಿಂದ ಹೊರಗಿಡಲು ಡೇಟಾ ಪರಿಕರ ಬಳಸುವ 'ವಿಷನ್ ಝೀರೋ' ಅಭಿಯಾನಗಳನ್ನು ಅವರು ಮುನ್ನಡೆಸಿದರು. ನ್ಯೂಯಾರ್ಕ್ ನಗರದ ತಿದ್ದುಪಡಿಗಳ ವಿಭಾಗದ ಇನ್ಸ್ಫೆಕ್ಟರ್ ಜನರಲ್ ಆಗಿದ್ದರು.