ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕದಿಂದ ಹೆಚ್ಚು ಹಾನಿಗೊಳಗಾದ ಅಮೆರಿಕ ಮುಂದಿನ ವರ್ಷ ಇದೇ ಸಮಯದ ಹೊತ್ತಿಗೆ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್, ಅಮೆರಿಕದ ಸ್ಥಿತಿಗತಿ ಯಾವಾಗ ಸಾಮಾನ್ಯ ಸ್ಥಿತಿಗೆ ಮರಳುತ್ತವೆ ಎಂಬುದು ಖಚಿತವಾಗಿ ತಿಳಿದಿಲ್ಲ. ಆದರೆ ಮುಂದಿನ ವರ್ಷದ ಈ ಹೊತ್ತಿಗೆ ದೇಶವು ಸಹಜ ಸ್ಥಿತಿಗೆ ಮರಳಬಹುದೆಂದು ನಾವು ಆಶಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.
ಕೊರೊನಾದಿಂದಾಗಿ ಅಮೆರಿಕದಲ್ಲಿ ಈವರೆಗೆ 5,11,839 ಜನರು ಬಲಿಯಾಗಿದ್ದಾರೆ. ದೇಶವು ಸಹಜ ಸ್ಥಿತಿಗೆ ಮರಳ ಬೇಕೆಂದರೆ ನಾವೆಲ್ಲ ಮಾಡಬೇಕಾದ ಕೆಲಸ ತುಂಬಾ ಇದೆ ಎಂದು ಹೇಳಿದರು.
ಇದನ್ನೂ ಓದಿ: ವಿದೇಶಾಂಗ ನೀತಿ ಕುರಿತು ಆ್ಯಂಟನಿ ಬ್ಲಿಂಕೆನ್ ಭಾಷಣ
ಕೋವಿಡ್-19 ಲಸಿಕೆಗಳ ಉತ್ಪಾದನೆ ಹೆಚ್ಚಿಸಲು ಮತ್ತು ಅಮೆರಿಕನ್ನರಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಕ್ರಮಗಳನ್ನು ನಿನ್ನೆ ಪ್ರಕಟಿಸಿದ್ದಾರೆ. ಲಸಿಕೆ ನೀಡುವ ಸ್ಥಳಗಳನ್ನು ನಾವು ಹೆಚ್ಚಿಸುತ್ತಿದ್ದೇವೆ. ಜನರು ತಮ್ಮ ಫ್ಲೂ ಶಾಟ್‌ನಂತೆ ಕೊರೊನಾ ಲಸಿಕೆ ಶಾಟ್ ಪಡೆಯುವುದನ್ನು ಸುಲಭಗೊಳಿಸಲು 7,000 ಕ್ಕೂ ಹೆಚ್ಚು ಔಷಧಾಲಯಗಳಿಗೆ ಲಕ್ಷಾಂತರ ಲಸಿಕೆಗಳನ್ನು ಕಳುಹಿಸಿದ್ದೇವೆ ಎಂದು ತಿಳಿಸಿದರು.
ಕ್ರೀಡಾಂಗಣಗಳು, ಸಮುದಾಯ ಕೇಂದ್ರಗಳು, ಪಾರ್ಕಿಂಗ್ ಸ್ಥಳಗಳಂತಹ ಜಾಗಗಳಲ್ಲಿ ಸಾಮೂಹಿಕ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರವು ರಾಜ್ಯಗಳೊಂದಿಗೆ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ ಮೂರು ಲಸಿಕೆಗಳು ತುರ್ತು ಬಳಕೆಯ ಅನುಮತಿಯನ್ನು ಪಡೆದಿವೆ. ಮೂರು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳ ಉತ್ಪಾದನೆಯೊಂದಿಗೆ, ತುರ್ತು ರಾಷ್ಟ್ರೀಯ ಅಗತ್ಯವನ್ನು ತ್ವರಿತವಾಗಿ ಪರಿಹರಿಸಲು ಮತ್ತು ಶಾಲೆಗಳನ್ನು ಸುರಕ್ಷಿತವಾಗಿ ತೆರೆಯಲು ಸಹಾಯ ಮಾಡಲು ನಮಗೆ ಅವಕಾಶವಿದೆ ಎಂದರು.