ವಾಷಿಂಗ್ಟನ್: ಇರಾಕ್ ಪ್ರಧಾನಿ ಮುಸ್ತಫಾ ಅಲ್ ಕದಿಮಿ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ನಡೆಸಿದ ಡ್ರೋನ್ ದಾಳಿಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಖಂಡಿಸಿದ್ದಾರೆ.
ಇರಾಕ್ ಪ್ರಧಾನಿ ಮುಸ್ತಫಾ ಅಲ್ ಕದಿಮಿ ಅವರ ಮನೆ ಮೇಲೆ ಡ್ರೋನ್ ದಾಳಿ ನಡೆದಿದೆ. ಈ ದುಷ್ಕೃತ್ಯದಲ್ಲಿ ಪ್ರಧಾನಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಇರಾಕ್‌ನ ಪ್ರಜಾಪ್ರಭುತ್ವವವನ್ನು ದುರ್ಬಲಗೊಳಿಸಲು ಕೆಲ ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ. ಈ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಜೋ ಬೈಡನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇರಾಕ್ ಪ್ರಧಾನಿಗೆ ಯಾವುದೇ ಹಾನಿಯಾಗಿಲ್ಲ. ಈ ಭಯೋತ್ಪಾದಕ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇರಾಕ್‌ನ ಶಾಂತಿ, ಸಂಯಮ, ಸಾರ್ವಭೌಮತ್ವ, ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಕಾರ್ಯದಲ್ಲಿ ಮುಂದಾಗಿದ್ದೇವೆ. ಈ ಭಯೋತ್ಪಾದಕ ದಾಳಿ ಕುರಿತು ತನಿಖೆ ನಡೆಸಲು ಇರಾಕ್‌ನ ಭದ್ರತಾ ಪಡೆಗಳಿಗೆ ಯುಎಸ್ ಸಹಾಯ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷರು ಪುನರುಚ್ಚರಿಸಿದ್ದಾರೆ.
ಕಳೆದ ತಿಂಗಳ ಚುನಾವಣಾ ಫಲಿತಾಂಶಗಳ ನಂತರ ಇರಾಕ್‌ನಲ್ಲಿ ರಾಜಕೀಯ ಉದ್ವಿಗ್ನತೆ ಉಂಟಾಗಿದೆ. ಚುನಾವಣಾ ಫಲಿತಾಂಶ ತಿರಸ್ಕರಿಸಿದ ರಾಜಕೀಯ ಪಕ್ಷಗಳ ಅನುಯಾಯಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿಯೇ ಪ್ರಧಾನಿ ನಿವಾಸದ ಮೇಲೆ ದಾಳಿ ನಡೆದಿರುವುದು ಅಚ್ಚರಿ ತಂದಿದೆ.