ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಜೋ - ಬೈಡನ್ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯವಾಗುವ ಮೊದಲೇ 80 ಮಿಲಿಯನ್ ಮತಗಳನ್ನು ಪಡೆಯುವುದರ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ದಿ ಅಸೋಸಿಯೇಟೆಡ್ ಪ್ರೆಸ್ ಮತ್ತು ಯು.ಎಸ್. ಎಲೆಕ್ಷನ್ಸ್ ಪ್ರಾಜೆಕ್ಟ್ನ ಮಾಹಿತಿ ಪ್ರಕಾರ, 155 ಮಿಲಿಯನ್ ಮತಗಳ ಎಣಿಕೆ ಈಗಾಗಲೇ ಸಂಪೂರ್ಣಗೊಂಡಿದೆ. ಅದಲ್ಲದೇ ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್ ರಾಜ್ಯದಲ್ಲಿನ ಮತ ಎಣಿಕೆ ಪ್ರಕ್ರಿಯೆ ಇನ್ನೂ ಸಹ ಮುಂದುವರೆದಿದೆ. 1908 ರ ಬಳಿಕ ಈ ವರ್ಷವೇ ಅತೀ ಹೆಚ್ಚು ಮತದಾನವಾಗಿರುವುದು ಗಮನಾರ್ಹವಾಗಿದೆ ಎಂದು ಅಮೆರಿಕದ ಪತ್ರಿಕೆಗಳು ವರದಿ ಮಾಡಿವೆ.
ಚುನಾವಣೆ ಬಳಿಕ, ಮತ ಎಣಿಕೆ ಮೊದಲೇ ಟ್ರಂಪ್ ಗೆದ್ದಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಇದೀಗ ಈ ಸುಳ್ಳು ಹೇಳಿಕೆಯು ಸಹ ಬೈಡನ್ಗೆ ವರವಾಗಿ ಪರಿಣಮಿಸಿದೆ. ಟ್ರಂಪ್ ಹೇಳಿಕೆ ಹಾಗೂ ಬೈಡನ್ಗೆ ದೊರೆತಿರುವ 80 ಮಿಲಿಯನ್ ಮತಗಳು ಇದೀಗ ಅಮೆರಿಕದಲ್ಲಿ ಬೈಡನ್ ಪ್ರಖ್ಯಾತಿ ದ್ವಿಗುಣಗೊಳಿಸುತ್ತಿದೆ.
ಪ್ರಸ್ತುತವಾಗಿ ಬೈಡೆನ್, ಜಾರ್ಜಿಯಾ ರಾಜ್ಯವನ್ನು ಹೊರತುಪಡಿಸಿ ಕಾಲೇಜ್ ಎಲೆಕ್ಟ್ರೋಲ್ ಮತಗಳ ಪೈಕಿ 290 - 232 ರಷ್ಟು ಮುಂದಿದ್ದಾರೆ. ಈ ಭಾಗದಲ್ಲಿ ಬೈಡೆನ್ ಟ್ರಂಪ್‌ಗಿಂತ ಶೇ.0.3ರಷ್ಟು ಮುಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಜಾರ್ಜಿಯಾ ಕ್ಷೇತ್ರದ ಮತ ಫಲಿತಾಂಶ ಬೈಡೆನ್ ಪರವಾಗಿಯೇ ಬಂದರೆ ಇನ್ನಷ್ಟು ಹೆಚ್ಚು ಮತಗಳು ಬೈಡನ್ ಮುಡಿಗೇರಲಿದೆ ಎಂದು ತಿಳಿದು ಬಂದಿದೆ.
ಅಮೆರಿಕದ ಚುನಾವಣೆಯಲ್ಲಿ ವಾರ್ ಫೀಲ್ಡ್ ಎಂದೇ ಪ್ರಖ್ಯಾತಿಗೊಂಡಿರುವ ಅರಿಜೋನಾ, ಜಾರ್ಜಿಯಾ ಮತ್ತು ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಟ್ರಂಪ್ 77,000 ಮತಗಳನ್ನು ಪಡೆದುಕೊಂಡಿದ್ದರೆ, ಬೈಡೆನ್ ಸುಮಾರು 45,000 ಮತಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಈ ಮತಗಳೇ ಅಂತಿಮವಲ್ಲ ಎಂದು ಅಮೆರಿಕದ ರಾಜಕೀಯ ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.