ವಾಷಿಂಗ್ಟನ್: ಅಮೆರಿಕ - ಚೀನಾ ನಡುವೆ ಅನೇಕ ವಿಚಾರಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಯುಎಸ್ ಅಧ್ಯಕ್ಷ ಜೋ ಬೈಡನ್ (America President Joe Biden) ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (China President Xi Jinping) ವರ್ಚುವಲ್ ಸಭೆ ನಡೆಸಿದ್ದಾರೆ.
ವಾಯುವ್ಯ ಚೀನಾದಲ್ಲಿ ಉಯ್ಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರ, ಹಾಂಗ್ ಕಾಂಗ್‌ನಲ್ಲಿ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಹಿಮ್ಮೆಟ್ಟಿಸುತ್ತಿರುವುದು, ಸ್ವಂ-ಆಡಳಿತದ ತೈವಾನ್ ದ್ವೀಪದ ವಿರುದ್ಧ ಮಿಲಿಟರಿ ಆಕ್ರಮಣ ಸೇರಿದಂತೆ ಅನೇಕ ವಿಚಾರಗಳನ್ನು ಜೋ ಬೈಡನ್ ಟೀಕಿಸಿದ್ದಾರೆ.
ಉಭಯ ರಾಷ್ಟ್ರಗಳ ನಡುವಿನ ಸ್ಪರ್ಧೆಯು ಉದ್ದೇಶಪೂರ್ವಕ ಸಂಘರ್ಷಕ್ಕೆ ಕಾರಣವಾಗಬಾರದೆಂದು ಸಭೆಯಲ್ಲಿ ಬೈಡನ್ ಚೀನಾ ಅಧ್ಯಕ್ಷರಿಗೆ ಒತ್ತಿ ಹೇಳಿದ್ದಾರೆ. ಸಂಘರ್ಷದ ಬದಲು ಸ್ಪರ್ಧೆಯು ಸರಳ, ನೇರವಾಗಿರುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ವಿಶ್ವಸಂಸ್ಥೆಯ ರೆಸಿಡೆಂಟ್ ಕೋ -ಆರ್ಡಿನೇಟರ್ ಆಗಿ ಶೊಂಬಿ ಶಾರ್ಪ್ ನೇಮಕ
'ಬೈಡನ್ ನನ್ನ ಹಳೇ ಸ್ನೇಹಿತ'
ಇದಕ್ಕೆ ಪ್ರತಿಕ್ರಿಯಿಸಿದ ಜಿನ್‌ಪಿಂಗ್, ನಾನು ನಿಮ್ಮೊಂದಿಗೆ ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೆ, ಎರಡೂ ಕಡೆಯವರು ಸಂವಹನವನ್ನು ಸುಧಾರಿಸುವ ಅಗತ್ಯವಿದೆ ಎಂದು ಬೈಡನ್ಗೆ ಹೇಳಿದರು. ಇದೇ ವೇಳೆ ಬೈಡನ್ ತನ್ನ ಹಳೇ ಸ್ನೇಹಿತ ಎಂದೂ ಜಿನ್‌ಪಿಂಗ್ ತಿಳಿಸಿದರು. ಚೀನಾದ ಆಂತರಿಕ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ, ಮಧ್ಯಪ್ರವೇಶಿಸಿದ್ದಕ್ಕಾಗಿ ಚೀನಾ ನಿಯೋಗವು ಶ್ವೇತಭವನದ ವಿರುದ್ಧ ವಾಗ್ದಾಳಿ ನಡೆಸಿದೆ.
ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಿದ ಮೇಲೆ ಚೀನಾದೊಂದಿಗೆ ದೂರವಾಣಿ ಮೂಲಕ ಮಾತಕತೆ ನಡೆಸಿದ್ದರು. ಆದರೆ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಮೊದಲ ದ್ವಿಪಕ್ಷೀಯ ಸಭೆ (US - China bilateral meeting) ಇದಾಗಿದೆ.