ಅಟ್ಲಾಂಟ: ಅಮೆರಿಕಾದ ಮಿನಿಯಾಪೊಲೀಸ್ನಲ್ಲಿ ನಡೆದಿದ್ದ ಕಪ್ಪು ವರ್ಣೀಯನ ಹತ್ಯೆ ವಿರೋಧಿಸಿ ಜಗತ್ತಿನ ಹಲವಡೆ ಪ್ರತಿಭಟನೆಗಳು ನಡೆಯುತ್ತಿವೆ. ಈ ಘಟನೆ ಮಾಸುವ ಮುನ್ನವೇ ಯುಎಸ್ನ ಜಾರ್ಜಿಯಾ ರಾಜ್ಯದ ರಾಜಧಾನಿ ಅಟ್ಲಾಂಟದಲ್ಲಿ ಇನ್ನೊಬ್ಬ ಕಪ್ಪು ವರ್ಣೀಯನನ್ನು ಗುಂಡಿಟ್ಟು ಕೊಲ್ಲಲಾಗಿದೆ.
ಶನಿವಾರ ತಡರಾತ್ರಿ ವೆಂಡಿ ರೆಸ್ಟೋರೆಂಟ್ ಬಳಿ ಅಟ್ಲಾಂಟ ಪೊಲೀಸರು 27 ವರ್ಷದ ರೇಶರ್ಡ್ ಬ್ರೂಕ್ ಎಂಬ ಯುವಕನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಹತ್ಯೆ ವಿರೋಧಿಸಿ ಮತ್ತೆ ಪ್ರತಿಭಟನೆ ಭುಗಿಲೆದ್ದಿದ್ದು, ರೆಸ್ಟೋರೆಂಟ್ಗೆ ಬೆಂಕಿ ಹೆಚ್ಚಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಅಟ್ಲಾಂಟ ಪೊಲೀಸ್ ಮುಖ್ಯಸ್ಥ ಎರಿಕಾ ಶೀಲ್ಡ್ಸ್ ರಾಜೀನಾಮೆ ನೀಡಿದ್ದಾರೆ.
ಹತ್ಯೆಗೆ ಪುರಾವೆಯಾಗಿ ದೊರೆತಿರುವ ವಿಡಿಯೋವನ್ನು ಪರಿಶೀಲಿಸುತ್ತಿದ್ದು, ಘಟನೆ ಸಂಬಂಧ ತನಿಖೆ ನಡೆಸುವಂತೆ ಅಟ್ಲಾಂಟ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಜಾರ್ಜಿಯಾ ತನಿಖಾ ದಳ (ಜಿಐಬಿ) ತಿಳಿಸಿದೆ.
ಘಟನೆ ವಿವರ:
ವೆಂಡಿ ರೆಸ್ಟೋರೆಂಟ್ ಸಮೀಪ ಬ್ರೂಕ್ ಕಾರಿನೊಳಗಡೆ ಮಲಗಿದ್ದು, ಇದರಿಂದ ಇತರೆ ವಾಹನ ಸವಾರರಿಗೆ ಅಡ್ಡಿಯಾಗಿದೆ ಎಂದು ಪೊಲೀಸರಿಗೆ ದೂರು ಬಂದಿದೆ. ಸ್ಥಳಕ್ಕೆ ಬಂದ ಪೊಲೀಸರು ಆತ ಮದ್ಯಪಾನ ಮಾಡಿರಬಹುದೆಂದು ಪರೀಕ್ಷೆಗೆ ಒಳಪಡಲು ಸೂಚಿಸಿದ್ದರು. ಇದಕ್ಕೆ ಬ್ರೂಕ್ ವಿರೋಧ ವ್ಯಕ್ತಪಡಿಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆತನ ಮೇಲೆ ಗುಂಡು ಹಾರಿಸಲಾಗಿದೆ ಎಂದು ಜಿಐಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.