ವಾಷಿಂಗ್ಟನ್: ಇದೇ ತಿಂಗಳ 21ರಂದು ಬೃಹತ್ ಕ್ಷುದ್ರಗ್ರಹವೊಂದು ಭೂಮಿಯ ಸಮೀಪದಲ್ಲಿಯೇ ಹಾದುಹೋಗಲಿದ್ದು, ಇದು ಇಲ್ಲಿಯವರೆಗೆ ಕಂಡುಬಂದಿರುವ ಗ್ರಹಗಳಲ್ಲಿಯೇ ಬೃಹದಾಕಾರವಾಗಿದೆ. ಇದು ಭೂಮಿಯಿಂದ ಸುಮಾರು ಎರಡು ದಶಲಕ್ಷ ಕಿಲೋ ಮೀಟರ್ ದೂರದಲ್ಲಿ ಸುರಕ್ಷಿತವಾಗಿ ಹಾದುಹೋಗಲಿದೆ ಎಂದು ನಾಸಾ ತಿಳಿಸಿದೆ.
2001ರ ಎಫ್‌ಒ 32 ಎಂದು ಕರೆಯಲ್ಪಡುವ ಈ ಗ್ರಹವು ಸುಮಾರು 0.8ರಿಂದ 1.7 ಕಿಲೋ ಮೀಟರ್ ವ್ಯಾಸವನ್ನು ಹೊಂದಿದ್ದು, ಇದು ಸುಮಾರು 20 ವರ್ಷಗಳ ಹಿಂದೆ ಪತ್ತೆಯಾಗಿತ್ತು. ಭೂಮಿಗೆ ಅತ್ಯಂತ ಸಾಮೀಪದಲ್ಲಿಯೇ ಈ ಗ್ರಹವು ಹಾದುಹೋಗುವುದರಿಂದ ಖಗೋಳಶಾಸ್ತ್ರಜ್ಞರ ಅಧ್ಯಯನಕ್ಕೆ ಅಗತ್ಯ ಅನುಕೂಲ ಒದಗಿಸಲಾಗುವುದು ಎಂದು ನಾಸಾ ಹೇಳಿದೆ.
ಸಾಮಾನ್ಯವಾಗಿ ಭೂಮಿಗೆ ಮುಖಾಮುಖಿಯಾಗಿ ಹಾದುಹೋಗುವ ಕ್ಷುದ್ರಗ್ರಹಗಳಿಗಿಂತ ಗಂಟೆಗೆ 124,000 ಕಿಲೋ ಮೀಟರ್ ವೇಗದಲ್ಲಿ ಈ ಗ್ರಹವು ಹಾದುಹೋಗಲಿದೆ. ಹೀಗಾಗಿ ಇದು "ಅಪಾಯಕಾರಿ ಕ್ಷುದ್ರಗ್ರಹ" ಎನ್ನಲಾಗುತ್ತಿದೆ.
ಈ ಗ್ರಹವು ಸೂರ್ಯನ ಸಾಮೀಪಕ್ಕೆ ಹೋಗಲಿದ್ದು, ಅದು ಬುಧನಿಗಿಂತ ಹತ್ತಿರ ಹಾಗೂ ಮಂಗಳನಿಗಿಂತ ಎರಡು ಪಟ್ಟು ಹತ್ತಿರ ಹಾದು ಹೋಗಲಿದೆ ಎಂದು ಅಂದಾಜಿಸಲಾಗಿದೆ.
ಈ ಗ್ರಹದ ಬಗ್ಗೆ ನಮಗೆ ಹೆಚ್ಚು ತಿಳಿಯದ ಕಾರಣ, ಖಗೋಳ ವಿಜ್ಞಾನಿಗಳ ಅಧ್ಯಯನಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದ್ದೇವೆ. ಇದು ಕ್ಷುದ್ರಗ್ರಹದ ಗಾತ್ರ, ನಿಖರತೆ, ಮೇಲ್ಮೈ ಪ್ರಕಾಶನ ಹಾಗೂ ಅದರ ಸಂಯೋಜನೆಯ ಕುರಿತು ತಿಳಿಯಲು ಅನುಕೂಲವಾಗಲಿದೆ ಎಂದು ಟಕ್ಸನ್‌ನ ಅರಿಝೋನಾ ವಿಶ್ವವಿದ್ಯಾಲಯದ ಚಂದ್ರ ಮತ್ತು ಗ್ರಹ ಪ್ರಯೋಗಾಲಯದ ಸಹಾಯಕ ಪ್ರಾಧ್ಯಾಪಕ ವಿಷ್ಣು ರೆಡ್ಡಿ ತಿಳಿಸಿದ್ದಾರೆ.