ಬೀಜಿಂಗ್: ವಿಶ್ವ ಆರೋಗ್ಯ ಸಂಸ್ಥೆಯು ಬೀಜಿಂಗ್ನ ಸಾರ್ವಜನಿಕ ಸಂಪರ್ಕ ಕಚೇರಿಯಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ ಬೆನ್ನಲ್ಲೇ ಡಬ್ಲ್ಯೂಎಚ್ಓ ಮತ್ತೊಮ್ಮೆ ಚೀನಾ ಪರವಾಗಿ ಮಾತನಾಡಿದೆ. ವುಹಾನ್ನಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಮಹಾಮಾರಿಯನ್ನು ಯಶಸ್ವಿಯಾಗಿ ತಡೆಗಟ್ಟಿದ ಚೀನಾದ ಕ್ರಮಗಳಿಂದ ವಿಶ್ವದ ಇತರ ರಾಷ್ಟ್ರಗಳು ಕಲಿಯುವುದು ಸಾಕಷ್ಟಿದೆ ಎಂದು ಡಬ್ಲ್ಯೂಎಚ್ಓ ಶ್ಲಾಘಿಸಿದೆ.
ಚೀನಾದ ವುಹಾನ್ನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಚೀನಾದ ಪಿಆರ್ ಏಜೆನ್ಸಿಯಂತೆ ಕೆಲಸ ಮಾಡುತ್ತಿರುವ ಡಬ್ಲ್ಯೂಎಚ್ಓ ಗೆ ನಾಚಿಕೆಯಾಗಬೇಕು ಎಂದು ಟ್ರಂಪ್ ಗುರುವಾರ ತೀಕ್ಷ್ಣ ವಾಗ್ದಾಳಿ ನಡೆಸಿದ್ದರು.
ಕೊರೊನಾ ವೈರಸ್ ಹರಡುವಿಕೆಯಲ್ಲಿ ಡಬ್ಲ್ಯೂಎಚ್ಓ ಪಾತ್ರದ ಕುರಿತು ತನಿಖೆಗೆ ಅಮೆರಿಕ ಸರ್ಕಾರ ಆದೇಶಿಸಿದ್ದು, ಡಬ್ಲ್ಯೂಎಚ್ಓ ಗೆ ತಾನು ನೀಡುತ್ತಿದ್ದ ಎಲ್ಲ ರೀತಿಯ ಧನಸಹಾಯವನ್ನು ಅಮಾನತುಗೊಳಿಸಿದೆ. ವಿಶ್ವಾದ್ಯಂತ 2,35,000 ಜನರನ್ನು ಬಲಿಪಡೆದಿರುವ ಕೊರೊನಾ ವೈರಸ್ ಹರಡಲು ಚೀನಾ ದೇಶವೇ ಕಾರಣವೆಂದು ಜರ್ಮನಿ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವಾರು ರಾಷ್ಟ್ರಗಳು ಆರೋಪಿಸಿವೆ.
ಕೊರೊನಾ ವೈರಸ್ ಹರಡುವಿಕೆಯಲ್ಲಿ ಚೀನಾದ ಪಾತ್ರ ಕುರಿತಂತೆ ಡಬ್ಲ್ಯೂಎಚ್ಓ ಹಾಗೂ ಅಮೆರಿಕದ ಮಧ್ಯೆ ಜಟಾಪಟಿ ಮುಂದುವರೆದಿದ್ದು, ವಿಶ್ವದ ಅನೇಕ ರಾಷ್ಟ್ರಗಳು ಸತತ ಚೀನಾ ಪರ ಹೇಳಿಕೆ ನೀಡುತ್ತಿರುವ ಡಬ್ಲ್ಯೂಎಚ್ಓ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿವೆ.