ಕೊಲೊರಾಡೋ/ಅಮೆರಿಕ:ಯುಎಸ್ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಕೊಲೊರಾಡೋದ ನವೀಕರಿಸಬಹುದಾದ ಇಂಧನ ಪ್ರಯೋಗಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಅವರ ಶುದ್ಧ ಇಂಧನ ಶಕ್ತಿಯ ಪ್ರಸ್ತಾಪಗಳು ಹವಾಮಾನ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಮೂಲಸೌಕರ್ಯ ಆಧುನೀಕರಿಸಲು ಹಾಗೆಯೇ ಉತ್ತಮ ಸಂಬಳದ ಉದ್ಯೋಗಗಳನ್ನು ಸೃಷ್ಟಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಅವರು ವಿವರಿಸಿದರು.
ಇದೇ ವೇಳೆ ಬೈಡನ್ ಬೋಯಿಸ್, ಇದಾಹೋ ಮತ್ತು ಸ್ಯಾಕ್ರಮೆಂಟೊ, ಕ್ಯಾಲಿಫೋರ್ನಿಯದಲ್ಲಿ ಕಾಳ್ಗಿಚ್ಚು ಬಗ್ಗೆ ಮಾಹಿತಿ ಪಡೆದರು ಮತ್ತು ಕ್ಯಾಲ್ಡೋರ್ ಬೆಂಕಿಯಿಂದ ತಾಹೋ ಸರೋವರದ ಸುತ್ತಲಿನ ಸಮುದಾಯಗಳಿಗೆ ಉಂಟಾದ ಹಾನಿ ವೀಕ್ಷಿಸಿದರು. ಹವಾಮಾನ ವೈಪರೀತ್ಯದಿಂದ ಈ ಕಾಳ್ಗಿಚ್ಚುಗಳು ಅಧಿಕವಾಗುತ್ತಿವೆ ಎಂಬ ವಾಸ್ತವವನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಬೈಡನ್ ಹೇಳಿದ್ರು.
ಹವಾಮಾನ ಬದಲಾವಣೆ.. ದೊಡ್ಡದಾಗಿ ಯೋಚಿಸಬೇಕಿದೆ ಎಂದ ಬೈಡನ್
ಅವರ ಯೋಜನೆಗಳಲ್ಲಿನ ಹವಾಮಾನ ನಿಬಂಧನೆಗಳಲ್ಲಿ ಶುದ್ಧ ಇಂಧನ ಮತ್ತು ವಿದ್ಯುತ್ ವಾಹನಗಳಿಗೆ ತೆರಿಗೆ ಪ್ರೋತ್ಸಾಹ, ಆರ್ಥಿಕತೆಯನ್ನು ಪಳೆಯುಳಿಕೆ ಇಂಧನಗಳಿಂದ ಮತ್ತು ಗಾಳಿ ಮತ್ತು ಸೌರ ಶಕ್ತಿಯಂತಹ ನವೀಕರಿಸಬಹುದಾದ ಮೂಲಗಳ ಕಡೆಗೆ ಪರಿವರ್ತಿಸುವ ಹೂಡಿಕೆಗಳು ಸೇರಿವೆ. 2050 ರ ವೇಳೆಗೆ ಯುಎಸ್ ಆರ್ಥಿಕತೆಯಿಂದ ಮಾಲಿನ್ಯವನ್ನು ತೆಗೆದುಹಾಕುವ ಗುರಿಯನ್ನು ಬೈಡನ್ ಹೊಂದಿದ್ದಾರೆ.
ಹವಾಮಾನ ಬದಲಾವಣೆ ಎದುರಿಸುವಾಗ ನಾವು ದೊಡ್ಡದಾಗಿ ಯೋಚಿಸಬೇಕು ಎಂದು ಬೈಡನ್ ಇದೇ ವೇಳೆ ಪ್ರತಿಪಾದಿಸಿದರು. ಸಣ್ಣದಾಗಿ ಯೋಚಿಸುವುದು ವಿಪತ್ತಿಗೆ ಒಂದು ಮುನ್ನುಡಿ ಎಂದು ಬೈಡನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದೊಂದಿಗೆ ಅಮೆರಿಕ ಸಹಕಾರ
ಇತ್ತೀಚೆಗಷ್ಟೇ ಅಮೆರಿಕ ಮತ್ತು ಭಾರತ ನಡುವೆ ಶುದ್ಧ ಇಂಧನ ಮತ್ತು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಸಹಕಾರವನ್ನು ವೃದ್ದಿಗೊಳಿಸುವ ಮಸೂದೆಯೊಂದನ್ನು ಅಮೆರಿಕ ಸೆನೆಟ್‌ನಲ್ಲಿ ಮಂಡಿಸಲಾಗಿದೆ. ಶುದ್ಧ ಇಂಧನ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಜಂಟಿ ಸಂಶೋಧನೆಗೆ ಉತ್ತೇಜನ, ಭಾರತದ ಶುದ್ಧ ಇಂಧನ ಮಾರುಕಟ್ಟೆಯಲ್ಲಿ ಅಮೆರಿಕದ ಖಾಸಗಿ ಹೂಡಿಕೆಗೆ ಪ್ರೋತ್ಸಾಹ ಮತ್ತು ಭಾರತದ ಹೊಸ ನವೀಕರಿಸಬಲ್ಲ ಇಂಧನ ಉತ್ಪಾದನಾ ಸಾಮರ್ಥ್ಯದ ವೃದ್ಧಿಗಾಗಿ ಕ್ರಮ ಸೇರಿದಂತೆ ಹಲವು ಅಂಶಗಳನ್ನು ಈ ಕಾಯ್ದೆ ಒಳಗೊಂಡಿದೆ.