ವಾಷಿಂಗ್ಟನ್(ಅಮೆರಿಕ) ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿದೆ. ಈಗ ಅಂಚೆ ಮತದಾನದ ಮೇಲೆ ಅಮೆರಿಕದ ಜನರು ಚಿತ್ತ ಹರಿಸಿದ್ದು, ವಾರ ಕಳೆದ್ರೂ ಸಹ ಕೆಲವೊಂದು ರಾಜ್ಯದ ಬ್ಯಾಲೆಟ್ ವೋಟ್ಗಳ ಎಣಿಕೆ ಪ್ರಕ್ರಿಯೆ ಮುಗಿಯುವಂತೆ ಕಾಣುವುದಿಲ್ಲ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂಪೂರ್ಣ ಫಲಿತಾಂಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಕಾರಣ ಅಂಚೆ ಮತದಾನ ಎನ್ನಲಾಗ್ತಿದೆ.
ಸುಮಾರು ಅರ್ಧದಷ್ಟು ರಾಜ್ಯಗಳು ಅಂಚೆ ಮತದಾನದ ಮೂಲಕ ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ. ಡೆಮಾಕ್ರಟಿಕ್ ಬೆಂಬಲಿಗರು ಅಂಚೆ ಮತದಾನವನ್ನು ಹೆಚ್ಚು ಬಳಸಿದ್ದಾರೆ. ಆದರೆ ರಿಪಬ್ಲಿಕನ್ನರು ಮತದಾನದ ದಿನದಂದು ಮತ ಚಲಾಯಿಸಿದ್ದಾರೆ.
ಈಗ ಬಂದಿರುವ ಹೆಚ್ಚಿನ ಸಂಖ್ಯೆಯ ಅಂಚೆ ಮತಪತ್ರಗಳನ್ನು ಎಣಿಸಲು ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇತರ ರಾಜ್ಯಗಳು ಮತದಾನ ದಿನಾಂಕದ ಕೆಲವು ದಿನಗಳ ನಂತರ ಅಂಚೆ ಮತಪತ್ರಗಳನ್ನು ಅನುಮತಿಸುತ್ತವೆ. ಎಣಿಕೆಯ ಪ್ರಕ್ರಿಯೆಯು ಇನ್ನೂ ಕೆಲ ಸಮಯವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.