ಫೋರ್ಟ್ ಲಾಡೆರ್‌ಡೇಲ್ (ಫ್ಲೊರಿಡಾ): ಇಟಾ ಚಂಡಮಾರುತದ ಅಬ್ಬರಕ್ಕೆ ಮಿಯಾಮಿ, ಮೆಕ್ಸಿಕೊ, ಫ್ಲೋರಿಡಾ, ಅಮೆರಿಕಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ.
ನೆರೆ ಪ್ರದೇಶದಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ಅಲ್ಲಿನ ಆಡಳಿತಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಆದ್ರೆ, ಇನ್ನೂ ಹಲವೆಡೆ, ಜನರು ಮನೆ ಬಿಟ್ಟು ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ರಕ್ಷಣಾ ಪಡೆಯಗಳು ರಕ್ಷಣಾ ಕಾರ್ಯಾಚರಣೆಗೆ ತೆರಳಲಾಗದ ಸ್ಥಿತಿ ನಿರ್ಮಾಣವಾಗಿದೆ.
ಮೆಕ್ಸಿಕೋದಲ್ಲಿ ಚಂಡಮಾರುತವು ಮಂಗಳವಾರ ಮತ್ತಷ್ಟು ತೀವ್ರಗೊಳ್ಳಲಿದ್ದು, ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಕ್ಯೂಬಾದಲ್ಲಿ ಸುಮಾರು 25 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ವಾಟೆಮಾಲಾದಲ್ಲಿ ಸುಮಾರು 150 ಮನೆಗಳು ಧ್ವಂಸವಾಗಿದ್ದು, ಹಲವೆಡೆ ಭೂ ಕುಸಿತ ಉಂಟಾಗಿದೆ. ಚಂಡ ಮಾರುತದ ಹೊಡೆತಕ್ಕೆ ಈವರೆಗೆ 150 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಒಂದೇ ಕುಟುಂಬದ 40 ಜನರು ಮೃತಪಟ್ಟಿದ್ದು, ಓರ್ವನನ್ನು ರಕ್ಷಿಸಲಾಗಿದೆ. ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ತಬಾಸ್ಕೋದಲ್ಲಿ ಭೀಕರ ನೆರೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಹಾಗಾಗಿ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.