ವಾಶಿಂಗ್ಟನ್: ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹತ್ಯೆಯ ಬಳಿಕ ಪಾಕಿಸ್ತಾನದ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸಿದ ಆರೋಪದ ಹೊರತಾಗಿಯೂ ಅಂದಿನ ಪಾಕ್ ಪ್ರಧಾನಿಗೆ ಕರೆ ಮಾಡಿದಾಗ ಅವರ ಪ್ರತಿಕ್ರಿಯೆ ಕೇಳಿ ನಾನು ನಿರಾಳನಾಗಿದ್ದೆ ಎಂದು ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳಿಕೊಂಡಿದ್ದಾರೆ.
ಸೆಪ್ಟೆಂಬರ್ 9, 2001ರಂದು ನ್ಯೂಯಾರ್ಕ್ನ ಅವಳಿ ಗೋಪುರಗಳ ಮೇಲೆ ದಾಳಿ ನಡೆಸಿದ 10 ವರ್ಷಗಳ ಬಳಿಕ 11 ಮೇ 2011ರಂದು ಯುಎಸ್ನ ಸೀಲ್ ಕಮಾಂಡೋಸ್ ಕಾರ್ಯಾಚರಣೆ ನಡೆಸಿ, ಪಾಕಿಸ್ತಾನದ ಅಬೋಟಾಬಾದ್ನ ಮನೆಯೊಂದರಲ್ಲಿ ಮೋಸ್ಟ್ ವಾಟೆಂಡ್ ಉಗ್ರ ಒಸಾಮ ಬಿನ್ ಲಾಡೆನ್ನನ್ನು ಕೊಂದು ಹಾಕಿತ್ತು.
ಬಿಡ್ ಲಾಡೆನ್ ಹತ್ಯೆಯ ಬಳಿಕ ನಾನು ಯುಎಸ್ ಮಾಜಿ ಅಧ್ಯಕ್ಷ ಜಾರ್ಜ್ ಬುಶ್, ಬಿಲ್ ಕ್ಲಿಂಟನ್ ಮತ್ತು ಯುಕೆ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರಿಗೆ ದೂರವಾಣಿ ಕರೆ ಮಾಡಿ, ಅಪ್ಘಾನ್ ಯುದ್ಧದ ಆರಂಭದಿಂದಲೂ ನಮಗೆ ನೀಡಿದ ಸಹಾಯಕ್ಕಾಗಿ ಕೃತಜ್ಞತೆ ಹೇಳಿದ್ದೆ. ಆ ಬಳಿಕ ಪಾಕಿಸ್ತಾನದ ಅಂದಿನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಗೆ ಕರೆ ಮಾಡಿದ್ದೆ. ಆಸಿಫ್ ಅಲಿ ಅವರು ದೇಶದ ಗಡಿ ದಾಟಿದ್ದಕ್ಕಾಗಿ ನನ್ನ ವಿರುದ್ಧ ಮಾತನಾಡಬಹುದು ಎಂದು ಭಾವಿಸಿದ್ದೆ. ಆದರೆ ಅವರ ಪ್ರತಿಕ್ರಿಯೆ ಕೇಳಿ ನಾನು ನಿರಾಳನಾಗಿದ್ದೆ. ಅವರು ಕಾರ್ಯಾಚರಣೆ ನಡೆಸಿದಕ್ಕಾಗಿ ನನಗೆ ಅಭಿನಂದನೆ ಹೇಳಿದ್ದರು. ಯಾವುದೇ ಪರಿಣಾಮ ಬೀರಲಿ, ತುಂಬಾ ಒಳ್ಳೆಯ ಸುದ್ದಿ ಎಂದಿದ್ದರು. ಅಲ್ಲದೆ ಅಲ್ ಖೈದಾ ಉಗ್ರರು ಅವರ ಪತ್ನಿ ಬೆನಜೀರ್ ಭುಟ್ಟೋರನ್ನು ಹತ್ಯೆ ಮಾಡಿದ ಬಗ್ಗೆ ನೆನೆಪಿಸಿಕೊಂಡಿದ್ದರು ಎಂದು ಒಬಾಮ ಇತ್ತೀಚೆಗೆ ಬಿಡುಗಡೆ ಮಾಡಿದ ತಮ್ಮ ಪುಸ್ತಕ "ಎ ಪ್ರಾಮಿಸ್ಡ್ ಲ್ಯಾಂಡ್'ನಲ್ಲಿ ಉಲ್ಲೇಖಿಸಿದ್ದಾರೆ.
ಎರಡು ಅವಧಿಗೆ ಪಾಕ್ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಅವರನ್ನು 27 ಡಿಸೆಂಬರ್ 2007ರಂದು ರಾವಲ್ಪಿಂಡಿಯಲ್ಲಿ ಬಾಂಬ್ ಸ್ಫೋಟಿಸಿ ಕೊಲ್ಲಲಾಗಿತ್ತು. ಅಲ್ ಖೈದಾ ಮತ್ತು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಆ ಸ್ಫೋಟ ನಡೆಸಿದ್ದವು ಎಂದು ಹೇಳಲಾಗುತ್ತದೆ.