ವಾಷಿಂಗ್ಟನ್ /ಅಮೆರಿಕ: ಏಳು ಪ್ರಯಾಣಿಕರಿದ್ದ ಚಿಕ್ಕ ವಿಮಾನವೊಂದು ಟೆನೆಸ್ಸಿ ಸರೋವರಕ್ಕೆ ಬಿದ್ದಿದ್ದು, ಎಲ್ಲಾ ಏಳು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಹತ್ತಿರದ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸೆಸ್ನಾ ಸಿ 501 ವಿಮಾನ ಟೆನೆಸ್ಸಿಯಲ್ಲಿರುವ ಪೆರ್ಸಿ ಪ್ರೀಸ್ಟ್ ಸರೋವರದಲ್ಲಿ ಪತನಗೊಂಡಿದೆ ಎಂದು ಫೆಡೆರಲ್ ಏವಿಯೇಷನ್ ಅಡ್ಮಿನಿಷ್ಟ್ರೇಶನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ವಿಮಾನವು ಸ್ಮಿರ್ನಾ ರುದರ್ಫೋರ್ಡ್ ಕೌಂಟಿ ವಿಮಾನ ನಿಲ್ದಾಣದಿಂದ ಪಾಮ್ ಬೀಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ವಿಮಾನದಲ್ಲಿದ್ದ ವಿಲಿಯಂ ಜೆ. ಲಾರಾ, ಗ್ವೆನ್ ಎಸ್. ಲಾರಾ, ಜೆನ್ನಿಫರ್ ಜೆ. ಮಾರ್ಟಿನ್, ಡೇವಿಡ್ ಎಲ್. ಮಾರ್ಟಿನ್, ಜೆಸ್ಸಿಕಾ ವಾಲ್ಟರ್ಸ್, ಜೊನಾಥನ್ ವಾಲ್ಟರ್ಸ್, ಮತ್ತು ಬ್ರಾಂಡನ್ ಹನ್ನಾರನ್ನು ಮೃತ ಪ್ರಯಾಣಿಕರೆಂದು ಗುರ್ತಿಸಲಾಗಿದೆ.
ಅಪಘಾತದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆದಿದೆ ಎಂದು ಅಗ್ನಿಶಾಮಕ ಕ್ಯಾಪ್ಟನ್ ಜೋಶುವಾ ಸ್ಯಾಂಡರ್ಸ್ ಹೇಳಿದ್ದಾರೆ. ಎಫ್‌ಎಎ ಮತ್ತು ಎನ್‌ಟಿಎಸ್‌ಬಿ ಎರಡೂ ವಿಮಾನ ಅಪಘಾತದ ಕುರಿತು ತನಿಖೆ ನಡೆಸುತ್ತಿವೆ.