ಡೆನ್ವೆರ್, ಅಮೆರಿಕ: ದುಷ್ಕರ್ಮಿಯೋರ್ವ ಗುಂಡಿನ ದಾಳಿ (Shoot out) ನಡೆಸಿದ ಕಾರಣದಿಂದ ಆರು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಅಮೆರಿಕದ ಕೊಲೊರಾಡೋದ ಡೆನ್ವೆರ್ ನಗರದಲ್ಲಿ ನಡೆದಿದೆ. ಆರೋರಾ ಸೆಂಟ್ರಲ್ ಹೈಸ್ಕೂಲ್ (Aurora Central High School) ಬಳಿ ಘಟನೆ ನಡೆದಿದ್ದು, ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಗಾಯಗೊಂಡ ಐದು ಮಂದಿ 14 ರಿಂದ 17 ವರ್ಷದೊಳಗಿನವರಾಗಿದ್ದು, ಮತ್ತೋರ್ವ 18 ವರ್ಷದವನಾಗಿದ್ದಾನೆ. ಐದು ಮಂದಿಯನ್ನು ಕೊಲೊರಾಡೋ ಮಕ್ಕಳ ಆಸ್ಪತ್ರೆಗೆ (Children's Hospital Colorado) ದಾಖಲಿಸಲಾಗಿದ್ದು, 18 ವರ್ಷದ ವಿದ್ಯಾರ್ಥಿಗೆ ಸಣ್ಣ ಪುಟ್ಟ ಗಾಯಗಳೊಂದಿಗೆ ತಾನೇ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದಾದ ನಂತರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆಂದು ತಿಳಿದು ಬಂದಿದೆ.
ಈ ಶಾಲೆಯಲ್ಲಿ ಸಾಕಷ್ಟು ಭದ್ರತೆಯಿದ್ದರೂ ಗುಂಡಿನ ದಾಳಿ ನಡೆಸಲಾಗಿದೆ. ಸಾಮಾನ್ಯವಾಗಿ ಬೇರೆ ವ್ಯಕ್ತಿಗಳನ್ನು ಶಾಲೆಯ ಒಳಗೆ ಬಿಡಲಾಗುವುದಿಲ್ಲ. ಆದರೂ ದಾಳಿ ಯಾರಿಂದ ನಡೆಯಿತು ಎಂಬುದು ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದ ಕುರಿತು ಆರೋರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಾನುವಾರ ರಾತ್ರಿಯಷ್ಟೇ ಇದೇ ಶಾಲೆಯಿಂದ ಐದು ಮೈಲು ದೂರದಲ್ಲಿ ಶೂಟೌಟ್ ನಡೆದಿದ್ದು, 18 ವರ್ಷದ ಯುವಕ ಸಾವನ್ನಪ್ಪಿದ್ದನು. ಅದಕ್ಕೂ ಎರಡು ದಿನಗಳ ಹಿಂದೆ ಅಂದರೆ ಶುಕ್ರವಾರ ಆರೋರಾದಲ್ಲಿರುವ ಮಾಲ್ನ ಪಾರ್ಕಿಂಗ್ ಸ್ಥಳದಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಲವು ಶೆಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ: Encounter: ಜಮ್ಮು-ಕಾಶ್ಮೀರದ ಹೈದರ್‌ಪೋರಾದಲ್ಲಿ ಇಬ್ಬರು ಉಗ್ರರ ಹತ್ಯೆ