ಡಲ್ಲಾಸ್ (ಟೆಕ್ಸಾಸ್): ಹಿಮಾವೃತ ಟೆಕ್ಸಾಸ್ ಅಂತರರಾಜ್ಯದ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ 130ಕ್ಕೂ ಹೆಚ್ಚು ವಾಹನ ಜಖಂಗೊಂಡಿದ್ದು, ಆರು ಜನರು ಸಾವನ್ನಪ್ಪಿದ್ದಾರೆ.
ಡೌನ್ಟೌನ್ ಫೋರ್ಟ್ ವರ್ತ್ ಬಳಿಯ ಅಂತರರಾಜ್ಯ ಹೆದ್ದಾರಿ 35ರಲ್ಲಿ ಸಂಭವಿಸಿದ ಅಪಘಾತದಲ್ಲಿ ಸೆಮಿಟ್ರೇಲರ್‌ಗಳು, ಕಾರುಗಳು ಮತ್ತು ಟ್ರಕ್‌ಗಳು ಒಂದಕ್ಕೊಂದು ಡಿಕ್ಕಿ ಹೊಡೆದು 130 ವಾಹನಗಳು ಒಂದರ ಮೇಲೊಂದು ಬಿದ್ದು ಜಖಂಗೊಂಡಿವೆ.
ಈ ದುರಂತದಲ್ಲಿ ವಾಹನಗಳಡಿ ಅನೇಕ ಜನರು ಸಿಲುಕಿದ್ದರು. ಅವರೆಲ್ಲರನ್ನೂ ಹೈಡ್ರಾಲಿಕ್ ವಾಹನದ ಮೂಲಕ ಸುರಕ್ಷಿತವಾಗಿ ಹೊರ ತರಲಾಗಿದೆ ಎಂದು ಫೋರ್ಟ್ ವರ್ತ್ ಅಗ್ನಿಶಾಮಕ ದಳದ ಮುಖ್ಯಸ್ಥ ಜಿಮ್ ಡೇವಿಸ್ ಹೇಳಿದರು.
ಆಸ್ಪತ್ರೆಗಳಲ್ಲಿ ಕನಿಷ್ಠ 65 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ 36 ಮಂದಿಯನ್ನು ಆ್ಯಂಬುಲೆನ್ಸ್ ಮೂಲಕ ಕರೆತರಲಾಗಿದೆ. ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳದಲ್ಲಿ ಇತರರಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಮೆಡ್ಸ್ಟಾರ್ ವಕ್ತಾರ ಮ್ಯಾಟ್ ಜವಾಡ್ಸ್ಕಿ ಹೇಳಿದ್ದಾರೆ.
ಬೆಳಗ್ಗೆ 6ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಆಸ್ಪತ್ರೆಗಳ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಸೇರಿ ಅನೇಕರು ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಜವಾಡ್ಸ್ಕಿ ಹೇಳಿದರು. ಅಪಘಾತದಲ್ಲಿ ಗಾಯಗೊಂಡಾಗ ಮೂವರು ಅಧಿಕಾರಿಗಳು ಕೆಲಸಕ್ಕೆ ತೆರಳುತ್ತಿದ್ದರು ಮತ್ತು ಘಟನಾ ಸ್ಥಳದಲ್ಲಿ ಕೆಲಸ ಮಾಡುವಾಗ ಒಬ್ಬ ಅಧಿಕಾರಿ ಗಾಯಗೊಂಡಿದ್ದಾರೆ.
ಎಲ್ಲರಿಗೂ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಫೋರ್ಟ್ ವರ್ತ್ ಪೊಲೀಸ್ ಮುಖ್ಯಸ್ಥ ನೀಲ್ ನೊಯೆಕ್ಸ್ ಹೇಳಿದ್ದಾರೆ. ಈ ರಸ್ತೆ ಮಾರ್ಗ ಮಂಜುಗಡ್ಡೆಯಿಂದ ಕೂಡಿರುವುದರಿಂದ ಈ ದೊಡ್ಡಮಟ್ಟದ ಅಪಘಾತ ಸಂಭವಿಸಿದೆ ಎಂದು ಜವಾಡ್ಸ್ಕಿ ಹೇಳಿದರು.