ಟೊರೊಂಟೊ(ಉತ್ತರ ಅಮೆರಿಕಾ): ಪೊಲೀಸ್ ಅಧಿಕಾರಿಯ ವೇಷದಲ್ಲಿ ಬಂದ ಗನ್ಮ್ಯಾನ್ವೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿ 16 ಮಂದಿ ಬಲಿಯಾಗಿರುವ ಭೀಕರ ಹತ್ಯಾಕಾಂಡ ಕೆನಡಾದ ನೋವಾ ಸ್ಕೋಟಿಯಾ ಪ್ರಾಂತ್ಯದಲ್ಲಿ ವರದಿಯಾಗಿದೆ. ಕಳೆದ 30 ವರ್ಷಗಳಲ್ಲೇ ನಡೆದ ಭೀಕರ ಗುಂಡಿನ ದಾಳಿ ಇದಾಗಿದೆ.
ಜನರು ವಾಸವಿದ್ದ ಮನೆಗಳ ಮೇಲೆ ಗುಂಡಿನ ಮಳೆಗರೆದಿರುವ ಪಾಪಿಯೊಬ್ಬ ಬಳಿಕ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಆರೋಪಿ ಗನ್ಮ್ಯಾನ್ ಕೂಡ ಮೃತಪಟ್ಟಿದ್ದಾನೆ. ನೋವಾ ಸ್ಕೋಟಿಯಾ ಪ್ರಾಂತ್ಯದಲ್ಲಿನ ಪೋರ್ಟಾಪಿಕ್ ಎಂಬ ಸಣ್ಣ ಪಟ್ಟಣದಲ್ಲಿ ಮೊದಲು ಮನೆಯೊಂದರ ಒಳಗೆ ಮತ್ತು ಹೊರಗೆ ಪೊಲೀಸರಿಗೆ ಮೃತದೇಹಗಳು ಸಿಕ್ಕಿವೆ. ಬಳಿಕ ಇತರೆ ಸ್ಥಳಗಳಲ್ಲೂ ಮೃತದೇಹಗಳು ಕಂಡುಬಂದಿವೆ.
ಆರೋಪಿ ಶೂಟರ್ನನ್ನು ಗೇಬ್ರಿಯಲ್ ವೋರ್ಟ್ಮನ್ (51) ಎಂದು ಪೊಲೀಸರು ಗುರುತಿಸಿದ್ದು, ಪೋರ್ಟಾಪಿಕ್ನಲ್ಲಿ ಕೆಲಕಾಲ ವಾಸವಿದ್ದ. ಪೊಲೀಸರ ಆರೋಪಿಯನ್ನ ಬಂಧಿಸಿದ ಬಳಿಕ ಆತ ಮೃತಪಟ್ಟಿದ್ದಾನೆ. ಆದರೆ ಹೇಗೆ ಮೃತಪಟ್ಟ ಎಂಬುದು ತಿಳಿದುಬಂದಿಲ್ಲ.