ಕೊಲರಾಡೋ(ಅಮೆರಿಕ): ಅಪರಿಚಿತವಾದ ಊರಿಗೆ ಹೋಗೋದಾದ್ರೆ ಇಂದಿನ ಜಮಾನದಲ್ಲಿ ನಮಗೆ ಗೂಗಲ್ ಮ್ಯಾಪ್ ಸಹಾಯ ಮಾಡುತ್ತೆ. ಆದ್ರೆ ಇದನ್ನೇ ನಂಬಿ ಹೋದವರಿಗೆ ಶಾಕ್ ಆಗಿದೆ. ನೂರಕ್ಕೂ ಅಧಿಕ ಕಾರುಗಳು ಕೆಸರು ರಸ್ತೆಯಲ್ಲಿ ಸಿಲುಕಿ ಒದ್ದಾಡಿದ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ.
ಕೊಲರಾಡೋದ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗೆ ಗೂಗಲ್ ಮ್ಯಾಪ್ ಸಹಾಯ ಪಡೆದ ನೂರಾರು ಕಾರು ಚಾಲಕರು ಅರ್ಧ ದಾರಿಯಲ್ಲಿ ಕೆಸರಿನ ರಸ್ತೆಯಲ್ಲಿ ಸಿಲುಕಿದ್ದಾರೆ. ಮಳೆಯ ಪರಿಣಾಮ ಕಚ್ಚಾ ರಸ್ತೆ ಸಂಪೂರ್ಣ ಕೆಸರುಮಯವಾಗಿತ್ತು.
ವಿಮಾನ ನಿಲ್ದಾಣಕ್ಕೆ ಸಮೀಪದ ದಾರಿ ಎಂದು ಗೂಗಲ್ ಮ್ಯಾಪ್ ತೋರಿಸಿದ್ದು, ಅರ್ಧ ದಾರಿಯಲ್ಲಿ ಎಲ್ಲ ಕಾರುಗಳು ಮುಂದಕ್ಕೆ ತೆರಳಲಾಗದೆ ಹಲವು ಗಂಟೆಗಳ ಕಾಲ ಇಕ್ಕಟ್ಟಿಗೆ ಸಿಲುಕಿದ್ದವು. ಕೆಲ ಕಾರುಗಳು ಒಂದರ್ಧ ಗಂಟೆಯಲ್ಲಿ ಹೇಗೋ ಮುಂದುವರೆದಿದ್ದರೆ ಉಳಿದ ಕಾರುಗಳು ಹಲವು ಗಂಟೆಗಳ ಕಾಲ ಮುಂದಕ್ಕೆ ಚಲಿಸಲಾಗದೆ ಪರದಾಡಿದವು.