ಗೋಮಾ (ಕಾಂಗೋ): ಎರಡು ದಶಕಗಳ ಬಳಿಕ ಕಾಂಗೋ (ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ) ರಾಷ್ಟ್ರದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಕಾಂಗೋದ ಗೋಮಾ ನಗರ ಸಮೀಪವಿರುವ ಮೌಂಟ್ ನೈರಾಗೊಂಗೊದಲ್ಲಿ ಲಾವಾರಸ ಹೊರಚಿಮ್ಮಿದೆ.
ರಾತ್ರೋರಾತ್ರಿ ಭೀಕರ ಜ್ವಾಲಾಮುಖಿಯನ್ನು ಕಂಡ ಗೋಮಾ ನಗರ ಹಾಗೂ ಸುತ್ತಮುತ್ತಲಿನ ಜನರು ಭಯಭೀತರಾಗಿ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಪ್ರಯತ್ನಿಸಿದ್ದಾರೆ. ಗೋಮಾದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರಿದ್ದು, ಸದ್ಯಕ್ಕೆ ಯಾವುದೇ ಸಾವುನೋವುಗಳ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಉತ್ತರ ಕಿವು ಪ್ರಾಂತ್ಯದ ಬೆನಿ ನಗರದಿಂದ ಗೋಮಾವನ್ನು ಸಂಪರ್ಕಿಸುವ ಒಂದು ಹೆದ್ದಾರಿಯನ್ನು ಲಾವಾ ಈಗಾಗಲೇ ಆವರಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಜನರನ್ನು ಸ್ಥಳಾಂತರಿಸುವ ಆದೇಶವನ್ನು ಅಧಿಕಾರಿಗಳು ನೀಡಿಲ್ಲ ಎಂದು ಹೇಳಲಾಗಿದೆ.
ಹಿಂದೆ ನಡೆದಿತ್ತು ದೊಡ್ಡ ಅನಾಹುತ
2002ರಲ್ಲಿ ಮೌಂಟ್ ನೈರಾಗೊಂಗೊದಲ್ಲಿ ಜ್ವಾಲಾಮುಖಿ ಸ್ಫೋಟಿಸಿದ್ದು, ನೂರಾರು ಜನರು ಮೃತಪಟ್ಟಿದ್ದರು.