ಕಂಪಾಲಾ: ಉಗಾಂಡದ ಪ್ರತಿಪಕ್ಷ ನಾಯಕ ಬೋಬಿ ವೈನ್ ಬಂಧನದ ಹಿನ್ನಲೆ ಕಳೆದ ವಾರ ನಡೆದ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 45ಕ್ಕೆ ಏರಿದೆ ಎಂದು ಉಗಾಂಡದ ಪೊಲೀಸರು ಖಚಿತಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವಕ್ತಾರ ಫ್ರೆಡ್ ಎನಂಗಾ, ಒಂದು ದಶಕದಲ್ಲಿ ಉಗಾಂಡದಲ್ಲಿ ನಡೆದ ಅತೀ ಕೆಟ್ಟ ಘಟನೆ ಇದಾಗಿದೆ ಎಂದು ಹೇಳಿದ್ದಾರೆ.
ಪೂರ್ವ ಪಟ್ಟಣದ ಲುವಾಕಾದಲ್ಲಿ ಬೋಬಿ ವೈನ್ ಅನ್ನು ಮತ್ತೆ ಬಂಧಿಸಿದ ನಂತರ ನವೆಂಬರ್ 18 ರಂದು ನಡೆದ ಎರಡು ದಿನಗಳ ಪ್ರತಿಭಟನೆಯಲ್ಲಿ 45 ಜನ ಸಾವನ್ನಪ್ಪಿದ್ದು, ಪ್ರತಿಭಟನೆಯಲ್ಲಿ ನಿರತರಾಗಿದ್ದ 800 ಮಂದಿಯನ್ನು ಬಂಧಿಸಿರುವುದಾಗಿ ಎನಂಗಾ ಹೇಳಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಳೆದ ವಾರ ಉಗಾಂಡದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿದ್ದಾರೆ ಮತ್ತು ಉಗಾಂಡಾದ ಅಧಿಕಾರಿಗಳಿಗೆ ಮಾನವ ಹಕ್ಕುಗಳ ಉಲ್ಲಂಘನೆಯ ಎಲ್ಲ ದುಷ್ಕರ್ಮಿಗಳನ್ನು ಹೊಣೆಗಾರರನ್ನಾಗಿ ನೋಡಿಕೊಳ್ಳುವಂತೆ ಕರೆ ನೀಡಿದ್ದಾರೆ.