ನಿಯಾಮೆ(ನೈಜರ್): ಶಂಕಿತ ಇಸ್ಲಾಮಿಕ್ ತೀವ್ರವಾದಿಗಳು ದಾಳಿಗೆ ಕನಿಷ್ಠ 69 ಮಂದಿ ಸಾವನ್ನಪ್ಪಿರುವ ಘಟನೆ ನೈಜರ್ನ ರಾಜಧಾನಿ ನಿಯಾಮೆಯಿಂದ 155 ಮೈಲಿ ದೂರದಲ್ಲಿರುವ ಬಾನಿಬಂಗೌ ನಗರದ ಬಳಿ ಮಂಗಳವಾರ ನಡೆದಿದ್ದು, ಗೃಹ ಸಚಿವಾಲಯ ಗುರುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಸ್ವಯಂ ರಕ್ಷಣಾ ತಂಡದ ಮೇಲೆ ಇಸ್ಲಾಮಿಕ್ ತೀವ್ರವಾದಿಗಳು ದಾಳಿ ನಡೆಸಿದ್ದು, ನಗರದ ಮೇಯರ್ ಕೂಡಾ ದಾಳಿಯಲ್ಲಿ ಮೃತಪಟ್ಟಿದ್ದಾನೆ. ಸ್ಥಳದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದು, ಸ್ವಯಂ ರಕ್ಷಣಾ ತಂಡದ 15 ಮಂದಿ ಸದಸ್ಯರು ಸೇರಿ ಹಲವರು ಗಾಯಗೊಂಡಿದ್ದಾರೆ.
ಸ್ಥಳೀಯ ಸ್ವಯಂ ರಕ್ಷಣಾ ಗುಂಪುಗಳು ಇಸ್ಲಾಮಿಕ್ ತೀವ್ರವಾದಿಗಳ ವಿರುದ್ಧ ಹೋರಾಟಕ್ಕಾಗಿ ನೈಜರ್ ಸೇನೆಗೆ ಸಹಕರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಇಸ್ಲಾಮಿಕ್ ತೀವ್ರವಾದಿಗಳು ಐಎಸ್ ಉಗ್ರರ ನೆರವಿನಿಂದ ಜನರು ಮತ್ತು ಸ್ಥಳೀಯ ಸ್ವಯಂ ರಕ್ಷಣಾ ಗುಂಪುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಜನವರಿ ತಿಂಗಳಲ್ಲಿ ಎರಡು ಗ್ರಾಮಗಳ ಮೇಲೆ ದಾಳಿ ನಡೆಸಿದ್ದ ತೀವ್ರಗಾಮಿಗಳು ಸುಮಾರು ನೂರು ಮಂದಿಯನ್ನು ಬಲಿ ಪಡೆದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಸರಣಿ ದಾಳಿಗಳನ್ನು ನಡೆಸಲಾಗುತ್ತಿದ್ದು, ಇಲ್ಲಿಯವರೆಗೆ ಸುಮಾರು 237 ಮಂದಿ ನಾಗರಿಕರನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ.
ಈ ದಾಳಿಗಳು ಕಳೆದ ಏಪ್ರಿಲ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏರಿದ ಮೊಹಮದ್ ಬೆಜೌಮ್ ಅವರಿಗೂ ಕೂಡಾ ಬೆದರಿಕೆಯಾಗಿದೆ. ಅಷ್ಟೆ ಅಲ್ಲದೇ ಮೊಹಮದ್ ಬಜೌಮ್ ಅಧಿಕಾರ ಸ್ವೀಕರಿಸುವ ಮೊದಲು ಮಿಲಿಟರಿ ದಂಗೆ ನಡೆಸಲು ಅಲ್ಲಿನ ಸೇನೆ ಹೊಂಚು ಹಾಕಿತ್ತು ಎಂಬುದಿಲ್ಲಿ ಉಲ್ಲೇಖಾರ್ಹ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಕ್ಕರೆ ಸಂಕಷ್ಟ: ಒಂದು ಕೆ.ಜಿ ಶುಗರ್ ಬೆಲೆ 145 ರೂಪಾಯಿ!