ಲಾಗೋಸ್(ನೈಜೀರಿಯಾ): ಸೋಮವಾರ ಮುಂಜಾನೆ ಪ್ರಾರ್ಥನಾ ಸಮಯದಲ್ಲಿ ಉತ್ತರ ನೈಜೀರಿಯಾದ ಮಸೀದಿಯೊಂದರ ಮೇಲೆ ದಾಳಿ ನಡೆಸಿರುವ ಬಂದೂಕುಧಾರಿಗಳು ರಕ್ತಪಾತ ಮಾಡಿದ್ದಾರೆ.
ನೈಜರ್ ರಾಜ್ಯದ ಮಶೆಗು ಸ್ಥಳೀಯ ಆಡಳಿತ ಪ್ರದೇಶದ ಮಜಕುಕಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಫುಲಾನಿ ಅಲೆಮಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬಂದೂಕುಧಾರಿಗಳು ಮಸೀದಿಯನ್ನು ಸುತ್ತುವರಿದು, ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಪ್ರಾರ್ಥನೆ ಸಲ್ಲಿಸುತ್ತಿದ್ದ 18 ಮಂದಿ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯಾಡಳಿತ ಪ್ರದೇಶದ ಅಧ್ಯಕ್ಷ ಅಲ್ಹಾಸನ್ ಇಸಾ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಹಲವು ವರ್ಷಗಳಿಂದ ಜನಾಂಗೀಯ ಸಂಘರ್ಷ ನಡೆಯುತ್ತಿದ್ದು, ಅಪಾರ ಸಾವು-ನೋವುಗಳಿಗೆ ಕಾರಣವಾಗುತ್ತಿದೆ. ನೀರು ಮತ್ತು ಪ್ರದೇಶಗಳ ಪ್ರವೇಶಕ್ಕಾಗಿ ದಶಕಗಳ ಹಿಂದಿನಿಂದಲೂ ಫುಲಾನಿ ಅಲೆಮಾರಿಗಳು ಹಾಗೂ ಗ್ರಾಮಸ್ಥರು ಮಧ್ಯೆ ಸಂಘರ್ಷ ಸಾಮಾನ್ಯವಾಗಿದೆ.
ಇತ್ತೀಚೆಗೆ ನೈಜೀರಿಯಾದ ವಾಯುವ್ಯ ರಾಜ್ಯಗಳಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದೆ. ರಾಜಧಾನಿಯಿಂದ ಸುಮಾರು 270 ಕಿಲೋ ಮೀಟರ್ ದೂರದಲ್ಲಿರುವ ಮಜಕುಕಾ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆ ಕಡಿಮೆಯಿದೆ. ಅಲ್ಲದೇ, ಘಟನಾ ಸ್ಥಳಕ್ಕೆ ತಲುಪಲು ಉತ್ತಮವಾದ ರಸ್ತೆ ಮಾರ್ಗವೂ ಇಲ್ಲ. ಈ ಹಿನ್ನೆಲೆ ಸಂಚು ರೂಪಿಸಿ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ತಾಲಿಬಾನ್, ಸಶಸ್ತ್ರ ಗುಂಪಿನ ಮಧ್ಯೆ ಗುಂಡಿನ ಕಾಳಗ: ಏಳು ಮಕ್ಕಳು ಸೇರಿ 17 ಮಂದಿ ಬಲಿ
ಕಳೆದ ವಾರವಷ್ಟೇ ವಾಯುವ್ಯ ಸುಕೊಟೊ ರಾಜ್ಯದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿ, ಕನಿಷ್ಠ 40 ಕ್ಕೂ ಹೆಚ್ಚು ಜನರನ್ನು ಕೊಂದಿದ್ದರು. ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವ ಪ್ರದೇಶಗಳೇ ದಾಳಿಕೋರರಿಗೆ ಅಡಗುತಾಣಗಳಾಗಿವೆ ಎಂದು ಹೇಳಲಾಗುತ್ತಿದೆ.