ನೈರೋಬಿ: ಸೋಮಾಲಿಯಾದಲ್ಲಿ ತನ್ನ ವಿಮಾನ ಪತನಗೊಂಡ ಕಾರಣಗಳ ಬಗ್ಗೆ ಕೀನ್ಯಾ ಶಂಕೆ ವ್ಯಕ್ತಪಡಿಸಿದೆ. ಕೀನ್ಯಾ ವಿಮಾನವನ್ನು ಸೋಮಾಲಿಯಾದಲ್ಲಿ ಹೊಡೆದುರುಳಿಸಲಾಗಿದೆ ಎಂದು ಸೋಮಾಲಿಯಾದ ಅಧಿಕಾರಿಯೊಬ್ಬರು ಹೇಳಿದ ನಂತರ ಕೀನ್ಯಾ ಆಕ್ರೋಶಗೊಂಡಿದೆ.
ವೈದ್ಯಕೀಯ ಸಾಮಗ್ರಿಯನ್ನು ಹೊತ್ತೊಯ್ಯುತ್ತಿದ್ದ ಕೀನ್ಯಾ ವಿಮಾನ ಸೋಮಾಲಿಯಾದಲ್ಲಿ ಸೋಮವಾರ ಮಧ್ಯಾಹ್ನ ಪತನಗೊಂಡು, ವಿಮಾನದಲ್ಲಿದ್ದ ಆರೂ ಜನ ಸಿಬ್ಬಂದಿ ಸಾವಿಗೀಡಾಗಿದ್ದರು. ಆಫ್ರಿಕನ್ ಎಕ್ಸಪ್ರೆಸ್ ಕಂಪನಿಗೆ ಸೇರಿದ ಟ್ವಿನ್ ಎಂಜಿನ್ ವಿಮಾನ ಸೋಮಾಲಿಯಾದ ಬಾರ್ಡೇಲ್ ಬಳಿ ಪತನಗೊಂಡಿದ್ದು, ಪತನದ ನಿಖರ ಕಾರಣಗಳು ಇನ್ನೂ ತಿಳಿದು ಬಂದಿಲ್ಲ ಎಂದು ಕೀನ್ಯಾ ನಾಗರಿಕ ವಾಯುಯಾನ ಸಚಿವಾಲಯ ಹೇಳಿದೆ. ವಿಮಾನ ಪತನದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಸೋಮಾಲಿಯಾ ಅಧ್ಯಕ್ಷರು ಕೀನ್ಯಾ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರೆ.
ಸೋಮಾಲಿಯಾದ ಸಮುದ್ರ ದಂಡೆಯ ವಾಯುನೆಲೆಯ ಬಳಿ ನೆಲದಿಂದ ಹಾರಿಬಿಡಲಾದ ಕ್ಷಿಪಣಿಯೊಂದರಿಂದ ಕೀನ್ಯಾ ವಿಮಾನ ಪತನಗೊಂಡಿರುವುದಾಗಿ ನೈರುತ್ಯ ರಾಜ್ಯ ಪ್ರಾದೇಶಿಕ ಆಡಳಿತದ ಸ್ಥಳೀಯ ಅಧಿಕಾರಿ ಅಹ್ಮದ್ ಇಸಾಕ್ ಹೇಳಿದ್ದಾರೆ.
ಸಮುದ್ರ ದಂಡೆಯ ಈ ವಾಯುನೆಲೆ ಅಲ್ಕೈದಾ ಬೆಂಬಲಿತ ಅಲ್ ಶಬಾಬ್ ಉಗ್ರವಾದಿಗಳ ವಿರುದ್ಧ ಹೋರಾಡಲು ರೂಪಿಸಲಾಗಿರುವ ಬಹುರಾಷ್ಟ್ರಗಳ ಆಫ್ರಿಕನ್ ಯುನಿಯನ್ ಮಿಷನ್ನ ಇಥಿಯೋಪಿಯಾದ ಬೇಸ್ ಆಗಿದೆ.