ಅಬುಜಾ (ನೈಜೀರಿಯಾ): ನೈಜೀರಿಯಾದ ವಾಯುವ್ಯ ರಾಜ್ಯವಾದ ಕೆಬ್ಬಿಯಲ್ಲಿರುವ ಶಾಲೆಯ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದು ಅನೇಕ ವಿದ್ಯಾರ್ಥಿಗಳು ಮತ್ತು ಐವರು ಶಿಕ್ಷಕರನ್ನು ಅಪಹರಿಸಿದ್ದಾರೆ.
ಬಿರ್ನಿನ್ ಯೌರಿ ಪ್ರದೇಶದಲ್ಲಿರುವ ಫೆಡರಲ್ ಸರ್ಕಾರಿ ಕಾಲೇಜಿಗೆ (ಮಾಧ್ಯಮಿಕ ಶಾಲೆ) ಹತ್ತಿರದ ಅರಣ್ಯ ಪ್ರದೇಶದಿಂದ ಬಂದ ಗನ್ಮ್ಯಾನ್ಗಳು ನುಗ್ಗಿದ್ದಾರೆ. ಶಾಲೆಯ ಕಾವಲು ಕಾಯುತ್ತಿದ್ದ ಪೊಲೀಸರೊಂದಿಗೆ ಗುಂಡಿಕಿ ಕಾಳಗ ನಡೆಸಿದ್ದು, ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ ಎಂದು ಕೆಬ್ಬಿಯ ಪೊಲೀಸ್ ವಕ್ತಾರ ನಫಿಯು ಅಬೂಬಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ನೈಜೀರಿಯಾ ಶಾಲೆಯ ಮೇಲೆ ಉಗ್ರರ ದಾಳಿ: 150 ವಿದ್ಯಾರ್ಥಿಗಳ ಅಪಹರಣ
ಓರ್ವ ಶಿಕ್ಷಕಿ ಹಾಗೂ ನಾಲ್ವರು ಪುರುಷ ಶಿಕ್ಷಕರನ್ನು ದುಷ್ಕರ್ಮಿಗಳು ಕರೆದೊಯ್ದಿದ್ದಾರೆ. ಅಪಹರಿಸಿದ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ಚುರುಕುಗೊಳಿಸಲಾಗಿದೆ ಎಂದು ಅಬೂಬಕರ್ ಹೇಳಿದ್ದಾರೆ.
ನೈಜೀರಿಯಾವು ಕೆಲ ದಿನಗಳಿಂದ ಶಾಲೆಗಳ ಮೇಲಿನ ದಾಳಿ ಮತ್ತು ವಿದ್ಯಾರ್ಥಿಗಳ ಅಪಹರಣ ಸೇರಿದಂತೆ ಸರಣಿ ದಾಳಿಗಳಿಗೆ ಸಾಕ್ಷಿಯಾಗಿದೆ. ಕಳೆದ ತಿಂಗಳು ನೈಜೆರ್ನ ಇಸ್ಲಾಮಿಕ್ ಸ್ಕೂಲ್ ಮೇಲೆ ಉಗ್ರರ ಗುಂಪು ದಾಳಿ ನಡೆಸಿ, 150 ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್ ಮಾಡಿದ್ದರು. 2020ರ ಡಿಸೆಂಬರ್ನಿಂದ ಇಲ್ಲಿಯವರೆಗೆ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗನ್ಮ್ಯಾನ್ಗಳು ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.