ಟ್ರಿಪೋಲಿ (ಲಿಬಿಯಾ): ಅಪರಿಚಿತ ಬಂದೂಕುಧಾರಿಗಳು ಲಿಬಿಯಾ ಪ್ರಧಾನಿ ಅಬ್ದುಲ್-ಹಮೀದ್ ದ್ಬೈಬಾ ಅವರ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಲಿಬಿಯಾದ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ರಾಜಧಾನಿ ಟ್ರಿಪೋಲಿಯಲ್ಲಿ ಗುರುವಾರ ಘಟನೆ ನಡೆದಿದ್ದು, ಗುರುತು ಸಿಗದ ವಾಹನದಲ್ಲಿದ್ದ ವ್ಯಕ್ತಿಗಳು ಬಂದೂಕುಗಳಿಂದ ಪ್ರಧಾನಮಂತ್ರಿ ಬೆಂಗಾವಲು ಪಡೆಯ ವಾಹನದ ಮೇಲೆ ದಾಳಿ ನಡೆಸಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರ ಅಬ್ದುಲ್ಮೆನೆಮ್ ಅಲ್-ಅರಬಿ ತಿಳಿಸಿದ್ದಾರೆ.
ದಾಳಿಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಲ್- ಅರಬಿ ದೃಢಪಡಿಸಿದ್ದು, ಲಿಬಿಯಾದಲ್ಲಿ ರಾಜಕೀಯದಲ್ಲಿ ಪ್ರಕ್ಷುಬ್ಧತೆ ಏರ್ಪಟ್ಟಿದೆ. ಈ ಬೆನ್ನಲ್ಲೇ ಪ್ರಧಾನಿ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಕ್ಷಣ ಉಕ್ರೇನ್ ತೊರೆಯುವಂತೆ ಅಮೆರಿಕ ನಾಗರಿಕರಿಗೆ ಬೈಡೆನ್ ಎಚ್ಚರಿಕೆ
ಗೃಹ ಸಚಿವಾಲಯವು ಈ ಅಪರಾಧ ಕೃತ್ಯವನ್ನು ಖಂಡಿಸುತ್ತದೆ ಹಾಗೂ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತನಿಖೆ ನಡೆಸಲಾಗುತ್ತಿದೆ ಎಂದು ಅಲ್- ಅರಬಿ ಸ್ಪಷ್ಟನೆ ನೀಡಿದ್ದಾರೆ.
ಈಗಷ್ಟೇ ಫಾತಿ ಬಶಾಘಾ ಅವರನ್ನು ಲಿಬಿಯಾದ ನೂತನ ಪ್ರಧಾನಿಯಾಗಿ ಅಲ್ಲಿನ ಸಂಸತ್ತು ಆಯ್ಕೆ ಮಾಡಿದೆ. ಮತ್ತೊಮ್ಮೆ ಚುನಾವಣೆ ನಡೆದು, ಅಧಿಕಾರ ಹಸ್ತಾಂತರ ಪ್ರಕ್ರಿಯೆಯೊಂದು ಬಾಕಿ ಉಳಿದಿದೆ. ಈ ವೇಳೆಯೇ ಪ್ರಧಾನಿ ಅಬ್ದುಲ್-ಹಮೀದ್ ದ್ಬೈಬಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲಾಗಿದ್ದು, ರಾಜಕೀಯದಲ್ಲಿ ಕೆಲವು ಅನುಮಾನಗಳನ್ನು ಹುಟ್ಟುಹಾಕಿದೆ.