ಝೆರೆಕೋರ್ (ಗಿನೀ): ಪಶ್ಚಿಮ ಆಫ್ರಿಕಾದ ಗಿನೀ ದೇಶದ ಝೆರೆಕೋರ್ನಲ್ಲಿ ಎಬೋಲಾ ಸಾಂಕ್ರಾಮಿಕ ರೋಗವಿರುವುದಾಗಿ ಘೋಷಿಸಲಾಗಿದ್ದು, ಈವರೆಗೆ ನಾಲ್ಕು ಜನ ಸಾವನ್ನಪ್ಪಿದ್ದು, ಏಳು ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆಂದು ವರದಿಯಾಗಿದೆ.
ಅಲ್ ಜಜೀರಾ ವರದಿಯ ಪ್ರಕಾರ, ಲೈಬೀರಿಯನ್ ಗಡಿಯ ಸಮೀಪವಿರುವ ಗೌಕೆ ಎಂಬಲ್ಲಿ ಏಳು ಜನರು ಅತಿಸಾರ, ವಾಂತಿ ಮತ್ತು ರಕ್ತಸ್ರಾವದಿಂದ ಬಳಲುತ್ತಿದ್ದರು.
ಸೋಂಕಿತ ರೋಗಿಗಳನ್ನು ಚಿಕಿತ್ಸಾ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
"ಈ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮತ್ತು ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳಿಗೆ ಅನುಸಾರವಾಗಿ, ಗಿನೀ ಸರ್ಕಾರವು ಎಬೋಲಾ ಸಾಂಕ್ರಾಮಿಕ ರೋಗ ಎಂದು ಘೋಷಿಸುತ್ತಿದೆ" ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ರೋಗ ನಿರ್ವಹಿಸಲು ನಾವು ತಯಾರಿ ನಡೆಸುತ್ತಿದ್ದೇವೆ. ಈ ಸಾಂಕ್ರಾಮಿಕ ರೋಗವು ಹೇಗೆ ಬಂತು ಎಂಬುದನ್ನು ಇನ್ನೂ ವಿವರಿಸಲು ಸಾಧ್ಯವಿಲ್ಲ. ಪ್ರತಿಕ್ರಿಯೆ ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ.
"ಪರೀಕ್ಷೆ, ಸಂಪರ್ಕ - ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸಾ ರಚನೆಗಳನ್ನು ಸ್ಥಾಪಿಸಲು ಮತ್ತು ಸಂಪೂರ್ಣ ಪ್ರತಿಕ್ರಿಯೆಗೆ ಡಬ್ಲ್ಯುಎಚ್‌ಒ ಬೆಂಬಲ ನೀಡುತ್ತಿದೆ" ಎಂದು ಆಫ್ರಿಕಾದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಾದೇಶಿಕ ನಿರ್ದೇಶಕ ಡಾ.ಮಾಟ್ಶಿದಿಸೊ ಮೊಯೆಟಿ ಹೇಳಿದ್ದಾರೆ.
"ಆರಂಭಿಕ ತನಿಖೆಯಲ್ಲಿ 2021ರ ಜನವರಿ 28ರಂದು ಸ್ಥಳೀಯ ದಾದಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಆರು ಜನರಲ್ಲಿ ಎಬೋಲಾ ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ" ಎಂದು ಡಬ್ಲ್ಯುಎಚ್‌ಒ ತನ್ನ ಹೇಳಿಕೆಯಲ್ಲಿ ತಿಳಿಸಿದೆ.