ಕ್ಯಾಮರೂನ್(ಆಫ್ರಿಕಾ): ಫುಟ್ಬಾಲ್ ಪಂದ್ಯಾವಳಿ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ವೇಳೆ ನಡೆದ ಭಾರಿ ಕಾಲ್ತುಳಿದಲ್ಲಿ 6 ಮಂದಿ ಮೃತಪಟ್ಟು, 40 ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಆಫ್ರಿಕಾದ ಕ್ಯಾಮರೂನ್ ದೇಶದಲ್ಲಿ ನಡೆದಿದೆ.
ಆಫ್ರಿಕನ್ ಕಪ್ ಆಫ್ ನೇಷನ್ಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆತಿಥೇಯ ಕ್ಯಾಮರೂನ್ ಮತ್ತು ಕೊಮೊರೊಸ್ ನಡುವಿನ ಪಂದ್ಯ ವೀಕ್ಷಿಸಲು 50 ಸಾವಿರಕ್ಕೂ ಅಧಿಕ ಅಭಿಮಾನಿಗಳು ಬಂದಿದ್ದರು. ಈ ವೇಳೆ, ಕೊರೊನಾ ನಿರ್ಬಂಧದ ಕಾರಣ ನಿಗದಿತ ಸಂಖ್ಯೆಯ ಜನರಿಗೆ ಅವಕಾಶ ಮಾಡಿಕೊಡಲಾಗಿತ್ತು.
ಈ ವೇಳೆ ಫುಟ್ಬಾಲ್ ಪಂದ್ಯಾವಳಿ ವೀಕ್ಷಣೆಗೆ ಸಾಗರೋಪಾದಿಯಲ್ಲಿ ಕ್ರೀಡಾಂಗಣದ ಹೊರಗೆ ನಿಂತಿದ್ದ ಅಭಿಮಾನಿಗಳು ಏಕಾಏಕಿ ಕ್ರೀಡಾಂಗಣದೊಳಕ್ಕೆ ನುಗ್ಗಲು ಯತ್ನಿಸಿದ್ದಾರೆ. ಸಿಬ್ಬಂದಿ ಇದನ್ನು ನಿಯಂತ್ರಿಸಲಾಗದೇ ಕ್ರೀಡಾಂಗಣದ ಬಾಗಿಲು ಹಾಕಿದ್ದಾರೆ. ಇದರಿಂದ ಭಾರೀ ತಳ್ಳಾಟ, ಕಾಲ್ತುಳಿತ ಉಂಟಾಗಿದೆ.
ಘಟನೆಯಲ್ಲಿ 6 ಅಭಿಮಾನಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಮಕ್ಕಳೂ ಸೇರಿದಂತೆ 40 ಅಧಿಕ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಸಾಸ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
50 ವರ್ಷಗಳ ಬಳಿಕ ಆಫ್ರಿಕಾದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಇದರಿಂದ ಅಭಿಮಾನಿಗಳು ತಮ್ಮ ತಂಡವನ್ನು ಬೆಂಬಲಿಸಲು ಬಂದಿದ್ದರು. ಕೋವಿಡ್ನಿಂದಾಗಿ ಹೆಚ್ಚಿನ ಜನರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗದ ಕಾರಣ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಲು ಯತ್ನಿಸಿದಾಗ ಕಾಲ್ತುಳಿತ ಉಂಟಾಗಿದೆ.
ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದೆ ಎಂದು ಆಫ್ರಿಕನ್ ಫುಟ್ಬಾಲ್ ಸಂಸ್ಥೆ ತಿಳಿಸಿದೆ. ಘಟನೆಯ ಮಧ್ಯೆಯೂ ನಡೆದ ಪಂದ್ಯದಲ್ಲಿ ಕ್ಯಾಮರೂನ್ ತಂಡ ಕೊಮೊರೊಸ್ ವಿರುದ್ಧ 2-1 ಅಂತರದಲ್ಲಿ ಜಯ ಸಾಧಿಸಿದೆ.
ಇದನ್ನೂ ಓದಿ: ಬೇರೊಬ್ಬರ ಖಾಸಗಿ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ: ರವಿಶಾಸ್ತ್ರಿ