ಕಂಪಾಲಾ, ಉಗಾಂಡಾ: ಮೂವರು ಆತ್ಮಹತ್ಯಾ ಬಾಂಬರ್ಗಳು ತಮ್ಮನ್ನು ತಾವು ಸ್ಫೋಟಿಸಿಕೊಳ್ಳುವುದರ ಜೊತೆಗೆ ಮೂವರು ನಾಗರಿಕರನ್ನು ಬಲಿ ಪಡೆದಿರುವ ಘಟನೆ ಉಗಾಂಡಾದ ರಾಜಧಾನಿ ಕಂಪಾಲಾ ನಗರದ ಮಧ್ಯ ಭಾಗದಲ್ಲಿ ನಡೆದಿದೆ.
33 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದು, ಅವರನ್ನು ಮುಲಾಗೋ ನ್ಯಾಷನಲ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತೋರ್ವ ಆತ್ಮಹತ್ಯಾ ಬಾಂಬರ್ ಪರಾರಿಯಾಗಿದ್ದು, ಆತನನ್ನು ಹಿಡಿಯಲು ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ವಕ್ತಾರ ಫ್ರೆಡ್ ಎನಂಗಾ ಮಾಹಿತಿ ನೀಡಿದ್ದಾರೆ.
ಸೆಂಟ್ರಲ್ ಪೊಲೀಸ್ ಠಾಣೆಯ ಚೆಕ್‌ಪಾಯಿಂಟ್‌ನಲ್ಲಿ ಮತ್ತು ಸಂಸತ್ತಿನ ಆವರಣದಲ್ಲಿ ಸೂಸೈಡ್ ಬಾಂಬರ್ಗಳು ದಾಳಿ ನಡೆಸಿದ್ದಾರೆ. ಇದಾದ ನಂತರ ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ಫ್ರೆಡ್ ಎನಂಗಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಾಗುವ ಸಾಧ್ಯತೆ ಇದ್ದು, ಅವುಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಬಾಂಬ್ ಬೆದರಿಕೆ ಎದುರಿಸಲು ಸಾರ್ವಜನಿಕರೂ ಕೂಡಾ ಸಜ್ಜಾಗಬೇಕಿದೆ ಎಂದು ಫ್ರೆಡ್ ಎನಂಗಾ ಹೇಳಿದ್ದಾರೆ.
ದಾಳಿ ಹೊಣೆ ಹೊತ್ತ ಐಸಿಸ್: ದಾಳಿಗೆ ಹಲವಾರು ರಾಷ್ಟ್ರಗಳು ಖಂಡನೆ ವ್ಯಕ್ತಪಡಿಸಿದ್ದು, ಆಫ್ರಿಕನ್ ಯೂನಿಯನ್ ಆಯೋಗದ ಅಧ್ಯಕ್ಷದ ಮೌಸಾ ಫಕಿ ಮಹಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ಸ್ (ಐಎಸ್) ಹೊತ್ತಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಆಕ್ರಮಿತ ಪ್ರದೇಶಗಳಿಂದ ಪಾಕಿಸ್ತಾನ ಜಾಗ ಖಾಲಿ ಮಾಡಬೇಕು: ವಿಶ್ವಸಂಸ್ಥೆಯಲ್ಲಿ ಭಾರತ ಒತ್ತಾಯ