ವಾರಿ (ನೈಜೀರಿಯಾ): ಮೆಷಿನ್ ಗನ್ ಮತ್ತು ರಾಕೆಟ್ ಚಾಲಿತ ಗ್ರೆನೇಡ್‌ಗಳಿಂದ ಶಸ್ತ್ರಸಜ್ಜಿತವಾದ ಉಗ್ರರು ಆಗ್ನೇಯ ನೈಜೀರಿಯಾದ ಜೈಲಿನ ಮೇಲೆ ದಾಳಿ ನಡೆಸಿದ್ದಾರೆ. ರಾತ್ರಿ ವೇಳೆ ನಡೆಸಿದ ಈ ದಾಳಿಯಲ್ಲಿ 1,800 ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ.
ಇಮೋ ರಾಜ್ಯದ ಓವೆರಿ ಪಟ್ಟಣದಲ್ಲಿ ನಸುಕಿನ ಜಾವ 2 ಗಂಟೆ ಸುಮಾರಿಗೆ ಈ ದಾಳಿ ಪ್ರಾರಂಭವಾಗಿದೆ. ಸುಮಾರು ಎರಡು ಗಂಟೆಗಳ ಕಾಲ ದಾಳಿ ನಡೆದಿದೆ ಎಂದು ಸ್ಥಳೀಯ ನಿವಾಸಿ ಉಷೆ ಒಕಾಫೋರ್ ಹೇಳಿದ್ದಾರೆ. ಬಂದೂಕುಧಾರಿಗಳು ಇತರ ಹಲವಾರು ಪೊಲೀಸ್ ಮತ್ತು ಮಿಲಿಟರಿ ಕಟ್ಟಡಗಳ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವಾರಗಳ ಅಂತರದಲ್ಲಿ ಆಗ್ನೇಯ ನೈಜೀರಿಯಾದಲ್ಲಿ ಮತ್ತೊಂದು ಹಿಂಸಾಚಾರ ಕಂಡುಬಂದಿದೆ. ನಾಲ್ಕು ಪೊಲೀಸ್ ಠಾಣೆಗಳು, ಮಿಲಿಟರಿ ಚೆಕ್‌ಪೋಸ್ಟ್‌ಗಳು ಮತ್ತು ಜೈಲು ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.